ನವದೆಹಲಿ: 'ದಿ ಟೆಲಿಗ್ರಾಫ್' ಸಂಪಾದಕ ಸಂಕರ್ಷಣ್ ಠಾಕೂರ್ (63) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಸೋಮವಾರ ಗುರುಗ್ರಾಮದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
1962ರಲ್ಲಿ ಪಟ್ನಾ ಜನಿಸಿದ ಅವರು, ಹಿರಿಯ ಪತ್ರಕರ್ತ ಜನಾರ್ದನ್ ಠಾಕೂರ್ ಅವರ ಪುತ್ರ. ಆರಂಭಿಕ ಶಿಕ್ಷಣವನ್ನು ಪಟ್ನಾದ ಸೇಂಟ್ ಕ್ಸೇವಿಯರ್‌ನಲ್ಲಿ ಪಡೆದ ಅವರು, ನಂತರ ದೆಹಲಿಯಲ್ಲಿ ಶಿಕ್ಷಣ ಮುಂದುವರಿಸಿದರು.
ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅವರು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು.
1984ರಲ್ಲಿ 'ಸಂಡೆ' ನಿಯತಕಾಲಿಕೆಯಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಠಾಕೂರ್ ಅವರಿಗೆ ಪತ್ನಿ ಸೋನಾ, ಮಗಳು ಜಹಾನ್ ಮತ್ತು ಮಗ ಆಯುಷ್ಮಾನ್ ಇದ್ದಾರೆ. 'ಇಂಡಿಯನ್ ಎಕ್ಸ್‌ಪ್ರೆಸ್', 'ತೆಹಲ್ಕಾ' ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಠಾಕೂರ್ ಕೆಲಸ ಮಾಡಿದ್ದಾರೆ.




