ಪಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಅವರನ್ನು ಭೇಟಿಯಾಗಿದ್ದಕ್ಕಾಗಿ ಇಂಡಿಯಾ ಮೈತ್ರಿ ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರ ವಿರುದ್ಧ ಬಿಜೆಪಿ ಹಿರಿಯ ನಾಯಕ, ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ರೆಡ್ಡಿ ತಮ್ಮ ಈ ನಡೆಯ ಮೂಲಕ 'ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದ್ದಾರೆ' ಎಂದು ಚೌಧರಿ ಟೀಕಿಸಿದ್ದಾರೆ.
'ಆರ್‌ಜೆಡಿ ಮುಖ್ಯಸ್ಥರು ಮೇವು ಹಗರಣದಲ್ಲಿ ಅಪರಾಧಿಯಾಗಿದ್ದಾರೆ. ಅವರು ಸಂಸದರೂ ಅಲ್ಲ. ಅಂಥವರನ್ನು ಇತ್ತೀಚೆಗೆ (ಸೆ.4) ಪಟ್ನಾದಲ್ಲಿ ರೆಡ್ಡಿ ಭೇಟಿಯಾಗಿದ್ದಾರೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಅವಮಾನ ಎಸಗಿದಂತಾಗಿದ್ದು, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದು ಸ್ಪಷ್ಟ' ಎಂದಿದ್ದಾರೆ.
ಇದೇ ವೇಳೆ, ಎನ್‌ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾದ ಸಂಶಯಗಳ ಬಗ್ಗೆ ಸ್ಪಷ್ಟನೆ ನೀಡಿದ ಚೌಧರಿ, 'ಜೆಡಿ(ಯು) ಮುಖ್ಯಸ್ಥ ನಿತೀಶ್ ಕುಮಾರ್ ಅವರೇ ಎನ್‌ಡಿಎ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ, ಮುಂದೆಯೂ ಅವರೇ ಆಗಿರುತ್ತಾರೆ. ಈ ಬಗ್ಗೆ ಪ್ರತಿಪಕ್ಷಗಳು ಏನು ಬೇಕಾದರೂ ಹೇಳಿಕೊಳ್ಳಲಿ' ಎಂದಿದ್ದಾರೆ.




