ಮುಳ್ಳೇರಿಯ:: ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನೀಡುವ ಆದ್ರ್ರಾ ಕೇರಳ ಪ್ರಶಸ್ತಿ ಕಾಸರಗೋಡಿನ ಗಡಿ ಗ್ರಾಮವಾದ ಬೆಳ್ಳೂರಿಗೆ ಎರಡನೇ ಬಾರಿಗೆ ಬಂದಿದ್ದು, ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಕಡಿಮೆ ನಿಧಿಯೊಂದಿಗೆ ಆರ್ಥಿಕವಾಗಿ ಹಿಂದುಳಿದ ಪಂಚಾಯತಿ ಎಂದು ಪರಿಗಣಿಸಲ್ಪಟ್ಟಿದ್ದರೂ, ಜಿಲ್ಲೆಯ ಹಲವು ಅತ್ಯುತ್ತಮ ಪಂಚಾಯತಿಗಳನ್ನು ಮೀರಿಸಿ ಬೆಳ್ಳೂರು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದೆ.
ಸ್ಥಳೀಯಾಡಳಿತ ಸಂಸ್ಥೆಗಳು ಆರೋಗ್ಯ ಕ್ಷೇತ್ರದಲ್ಲಿ ಖರ್ಚು ಮಾಡಿದ ಮೊತ್ತ, ಉಪಶಾಮಕ ಆರೈಕೆ ಕಾರ್ಯಕ್ರಮಗಳು, ವಾರ್ಡ್ ಮಟ್ಟದ ಚಟುವಟಿಕೆಗಳು, ಆರೋಗ್ಯ ಕ್ಷೇತ್ರದಲ್ಲಿ ಜಾರಿಗೆ ತಂದ ನವೀನ ವಿಚಾರಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ವಿಲೇವಾರಿ ಮುಂತಾದ ಅಂಶಗಳ ಮೇಲೆ ಪ್ರಶಸ್ತಿಯನ್ನು ಮೌಲ್ಯಮಾಪನ ಮಾಡಲಾಯಿತು.
2023-24ನೇ ಸಾಲಿನಲ್ಲಿ, ಬೆಳ್ಳೂರು ಗ್ರಾಮ ಪಂಚಾಯತಿ ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ 65 ಲಕ್ಷ ರೂ. ಮೌಲ್ಯದ ಯೋಜನಾ ಚಟುವಟಿಕೆಗಳನ್ನು ನಡೆಸಿದೆ. ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದ ಡಾ. ಜ್ಯೋತಿ ಮೋಳ್ ಅವರ ನೇತೃತ್ವದಲ್ಲಿ, 13 ಯೋಜನೆಗಳ ಮೂಲಕ ವಿವಿಧ ಚಟುವಟಿಕೆಗಳಿಗಾಗಿ 3060331 ರೂ.ಗಳನ್ನು ಖರ್ಚು ಮಾಡಲಾಗಿತ್ತು.
ಉಪಶಮನ ರೋಗಿಗಳ ಪುನರ್ವಸತಿಗಾಗಿ 'ತಣಲ್' ಸ್ವ-ಉದ್ಯೋಗ ಕೇಂದ್ರ, ಬಡವರಿಗೆ ಡ್ರೆಸ್ ಬ್ಯಾಂಕ್, ವಿಷಕಾರಿಯಲ್ಲದ ತರಕಾರಿಗಳನ್ನು ಬೆಳೆದು ರೋಗಿಗಳಿಗೆ ಉಚಿತವಾಗಿ ಒದಗಿಸುವ 'ಹಸಿರು ಸ್ಪರ್ಶಂ', ಪಂಚಾಯತಿಯ ಸಂಪೂರ್ಣ ಜನಸಂಖ್ಯೆಯ ರಕ್ತ ಗುಂಪು ಸಂಗ್ರಹ ಮತ್ತು ಕ್ಯಾನ್ಸರ್ ತಪಾಸಣೆಗಾಗಿ ಪಡೆಯೋಟ್ಟಂ ಯೋಜನೆ, 2023-25ರ ಆರೋಗ್ಯ ಭದ್ರತೆಗಾಗಿ ಸೇಫ್ ಬೆಳ್ಳೂರು ಯೋಜನೆ, ಕ್ಷಯ ಮುಕ್ತ ಚಟುವಟಿಕೆಗಳಿಗಾಗಿ ಬೆಳ್ಳೂರಿನಲ್ಲಿ ಸೂರ್ಯೋದಯ ಮತ್ತು ಅನ್ಯರಾಜ್ಯ ಕಾರ್ಮಿಕರಿಗೆ 'ಪ್ಯಾರ ಪ್ಯಾರ ಭಾಯಿ ಭಾಯಿ ಸಲಾಂ ನಮಸ್ತೆ' ಮುಂತಾದ ವಿವಿಧ ಚಟುವಟಿಕೆಗಳಿಗೆ ಪ್ರಶಸ್ತಿ ಆಯ್ಕೆಯಲ್ಲಿ ಹೆಚ್ಚಿನ ಗಮನ ನೀಡಲಾಗಿದೆ.
ಈ ಪ್ರಶಸ್ತಿಯು ಹೋಮಿಯೋ ಆಯುರ್ವೇದ ಅಲೋಪತಿ ಇಲಾಖೆಗಳ ಸಾಮೂಹಿಕ ಕೆಲಸದ ಫಲಿತಾಂಶವಾಗಿದೆ ಎಂದು ಪಂಚಾಯತಿ ಅಧ್ಯಕ್ಷ ಎಂ ಶ್ರೀಧರ ವಿಜಯವಾಣಿಗೆ ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿನ ಚಟುವಟಿಕೆಗಳು ಹೆಚ್ಚು ಸಕ್ರಿಯವಾಗಿ ಮುಂದುವರಿಯಲಿವೆ ಎಂದು ಕುಟುಂಬ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಸಿನಾ ಕೆ.ಪಿ. ಹೇಳಿದರು.
ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರವು ತನ್ನ ಕಾರ್ಯಾಚರಣೆಯ ಶ್ರೇಷ್ಠತೆಗಾಗಿ ಕಾಯ ಕಲ್ಪ, ರಾಷ್ಟ್ರೀಯ ಗುಣಮಟ್ಟ ಗುರುತಿಸುವಿಕೆ, ಆದ್ರ್ರ ಕೇರಳಂ ಮತ್ತು ಟಿಬಿ ಮುಕ್ತ ಪಂಚಾಯತ್‍ನಂತಹ ಪ್ರಶಸ್ತಿಗಳನ್ನು ಈಗಾಗಲೇ ಪಡೆದಿದೆ.




