HEALTH TIPS

ಚುನಾವಣಾ ಆಯೋಗವು ರಾಹುಲ್ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸುವ ಬದಲು ತನಿಖೆಗೆ ಆದೇಶಿಸಬೇಕಿತ್ತು: ಮಾಜಿ ಸಿಇಸಿ ಖುರೈಷಿ

ನವದೆಹಲಿ: 'ಮತ ಕಳ್ಳತನ' ಆರೋಪಗಳ ಕುರಿತು ಚುನಾವಣಾ ಆಯೋಗದ ಪ್ರತಿಕ್ರಿಯೆಗಾಗಿ ರವಿವಾರ ಅದನ್ನು ಕಟುವಾಗಿ ಟೀಕಿಸಿದ ಮಾಜಿ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಎಸ್.ವೈ.ಖುರೈಷಿ ಅವರು, ಆಯೋಗವು ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ 'ಆಕ್ಷೇಪಾರ್ಹ ಮತ್ತು ಅವಹೇಳನಕಾರಿ' ಭಾಷೆಯಲ್ಲಿ 'ಕೂಗುವ' ಬದಲು ಅವರು ಮಾಡಿರುವ ಆರೋಪಗಳ ತನಿಖೆಗೆ ಆದೇಶಿಸಬೇಕಿತ್ತು ಎಂದು ಹೇಳಿದರು.

ರಾಹುಲ್ ಆರೋಪಗಳನ್ನು ಮಾಡುವಾಗ ಬಳಸಿದ್ದ 'ಹೈಡ್ರೋಜನ್ ಬಾಂಬ್'ನಂತಹ ಹೆಚ್ಚಿನ ಪದಗಳು 'ರಾಜಕೀಯ ವಾಕ್ಚಾತುರ್ಯ',ಆದರೆ ಅವರು ಎತ್ತುತ್ತಿರುವ ಆರೋಪಗಳ ಬಗ್ಗೆ ವಿವರವಾದ ತನಿಖೆಯ ಅಗತ್ಯವಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಖುರೈಷಿ ಪ್ರತಿಪಾದಿಸಿದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು(ಎಸ್‌ಐಆರ್) ನಡೆಸಿದ ರೀತಿಗಾಗಿ ಚುನಾವಣಾ ಆಯೋಗವನ್ನು ತರಾಟೆಗೆತ್ತಿಕೊಂಡ ಅವರು, ಅದು ತೊಂದರೆಗಳ ಪೆಟ್ಟಿಗೆಯನ್ನು ತೆರೆದಿದ್ದು ಮಾತ್ರವಲ್ಲ, ಕಣಜಗಳ ಗೂಡಿಗೂ ಕೈ ಹಾಕಿದೆ ಮತ್ತು ಇದು ಅದಕ್ಕೆ ಹಾನಿಯನ್ನುಂಟು ಮಾಡಲಿದೆ ಎಂದರು.

ಆಯೋಗವು ಈಗಾಗಲೇ 'ಮತಕಳ್ಳತನ'ದ ಎಲ್ಲ ಆರೋಪಗಳನ್ನು ತಿರಸ್ಕರಿಸಿದೆ.

'ಚುನಾವಣಾ ಆಯೋಗದ ಕುರಿತು ಯಾವುದೇ ಟೀಕೆಯನ್ನು ಕೇಳಿದಾಗ ಕೇವಲ ಓರ್ವ ಭಾರತೀಯ ಪ್ರಜೆಯಾಗಿ ಮಾತ್ರವಲ್ಲ, ನಾನು ಸ್ವತಃ ಸಿಇಸಿ ಆಗಿದ್ದು ಆ ಸಂಸ್ಥೆಯ ನಿರ್ಮಾಣದಲ್ಲಿ ಒಂದೆರಡು ಇಟ್ಟಿಗೆಗಳನ್ನು ಹಾಕಿರುವುದರಿಂದ ನನಗೆ ತುಂಬ ಕಳವಳ ಮತ್ತು ನೋವು ಉಂಟಾಗುತ್ತದೆ' ಎಂದು ಖರೈಷಿ ಜಾಗರ್‌ ನಾಟ್ ಬುಕ್ಸ್ ಪ್ರಕಟಿತ ತನ್ನ ನೂತನ ಕೃತಿ 'ಡೆಮಾಕ್ರಸಿಸ್ ಹಾರ್ಟ್‌ಲ್ಯಾಂಡ್'ನ ಬಿಡುಗಡೆಗೆ ಮುನ್ನ ನೀಡಿದ ಸಂದರ್ಶನದಲ್ಲಿ ಹೇಳಿದರು.

'ಚುನಾವಣಾ ಆಯೋಗದ ಮೇಲೆ ದಾಳಿ ನಡೆದಾಗ ಅಥವಾ ಅದನ್ನು ಯಾವುದೇ ರೀತಿಯಲ್ಲಿ ದುರ್ಬಲಗೊಳಿಸಿದಾಗ ನನಗೆ ಕಳವಳವಾಗುತ್ತದೆ. ಚುನಾವಣಾ ಆಯೋಗವು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಕಳವಳವನ್ನೂ ವ್ಯಕ್ತಪಡಿಸಬೇಕು. ಆಯೋಗದ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದಾದ ಎಲ್ಲ ಶಕ್ತಿಗಳು ಮತ್ತು ಒತ್ತಡಗಳನ್ನು ಎದುರಿಸುವುದು ಅವರ ಜವಾಬ್ದಾರಿಯಾಗಿದೆ' ಎಂದು 2010-12ರ ನಡುವೆ ಸಿಇಸಿ ಆಗಿದ್ದ ಖುರೈಷಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries