ಪುಣೆ: ಲಾ ನಿನಾ ಪರಿಸ್ಥಿತಿ ವರ್ಷಾಂತ್ಯಕ್ಕೆ ಮರಳುವ ಸಾಧ್ಯತೆಯನ್ನು ಹವಾಮಾನ ತಜ್ಞರು ಒತ್ತಿಹೇಳಿದ್ದು, ಇದು ಜಾಗತಿಕ ಹವಾಮಾನ ಪರಿಸ್ಥಿತಿಯನ್ನು ರೂಪುಗೊಳಿಸಲಿದೆ ಮತ್ತು ಭಾರತದಲ್ಲಿ ವಾಡಿಕೆಗಿಂತ ಅಧಿಕ ಶೀತದ ವಾತಾವರಣ ಇರಲಿದೆ ಎಂದು ಅಂದಾಜಿಸಿದ್ದಾರೆ.
ಅಮೆರಿಕದ ನ್ಯಾಷನಲ್ ವೆದರ್ ಸರ್ವೀಸಸ್ ಸಂಸ್ಥೆಯ ಹವಾಮಾನ ಮುನ್ಸೂಚನೆ ಕೇಂದ್ರ ಸೆ.11ರಂದು ನೀಡಿದ ಮುನ್ಸೂಚನೆಯ ಪ್ರಕಾರ, 2025ರ ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳ ನಡುವೆ ಲಾ ನಿನಾ ಅಭಿವೃದ್ಧಿಯಾಗುವ ಸಾಧ್ಯತೆ ಶೇ.71ರಷ್ಟು ಇದೆ.
2025ರ ಡಿಸೆಂಬರ್ ಮತ್ತು 2026ರ ಫೆಬ್ರವರಿ ನಡುವೆ ಈ ಸಾಧ್ಯತೆ ಶೇ.54ಕ್ಕೆ ಇಳಿಯಲಿದೆ. ಆದರೆ ಲಾ ನಿನಾ ಪರಿಸ್ಥಿತಿಯ ಮೇಲಿನ ನಿಗಾ ಮುಂದುವರಿಯಲಿದೆ.
ಎಲ್ ನಿನೊ- ದಕ್ಷಿಣ ಸಂಚಲನದ ತಂಪಾಗುವಿಕೆಯ ಹಂತವು ಸಮಭಾಜಕ ಫೆಸಿಫಿಕ್ ಪ್ರದೇಶದಲ್ಲಿ ಸಾಗರ ತಾಪಮಾನವನ್ನು ಪರಿವರ್ತಿಸಲಿದ್ದು, ವಿಶ್ವಾದ್ಯಂತ ಹವಾಮಾನದ ಮೇಲೆ ಪರಿಣಾಮ ಬೀರಲಿದೆ. ಭಾರತಕ್ಕೆ ಸಂಬಂಧಿಸಿದಂತೆ ಚಳಿಗಾಲ ವಾಡಿಕೆಗಿಂತ ತೀವ್ರವಾಗಿ ಇರಲಿದೆ ಎಂದು ಹೇಳಲಾಗಿದೆ.
ಭಾರತದ ಹವಾಮಾನ ಇಲಾಖೆ ಇತ್ತೀಚೆಗೆ ತನ್ನ ಇಎನ್‍ಎಸ್‍ಓ ಬುಲೆಟಿನ್‍ನಲ್ಲಿ ಸಮಭಾಜಕ ಫೆಸಿಫಿಕ್ ಪ್ರದೇಶದಲ್ಲಿ ಸದ್ಯಕ್ಕೆ ತಟಸ್ಥ ಪರಿಸ್ಥಿತಿ ಇದೆ ಎಂದು ಹೇಳಿತ್ತು. ಇತರ ಜಾಗತಿಕ ಮಾದರಿಗಳಿಗೆ ಅನುಸಾರವಾಗಿ ಐಎಂಡಿಯ ಮಾನ್ಸೂನ್ ಮಿಷನ್ ಕ್ಲೈಮೇಟ್ ಫೋರ್‍ಕಾಸ್ಟ್ ಸಿಸ್ಟಂ ಅಂದಾಜಿನಂತೆ, ಇಡೀ ಮುಂಗಾರು ಹಂಗಾಮಿನಲ್ಲಿ ತಟಸ್ಥ ಸ್ಥಿತಿ ಮುಂದುವರಿಯಲಿದೆ ಎಂದು ಹೇಳಲಾಗಿತ್ತು.

