ಕುಂಬಳೆ: ಬರಹಗಳು ಕೃತಿಕಾರನಿಗೆ ಹಸಿಯಾದ ಬಾಳಂತನವಾದರೆ, ಓದುಗನಿಗದು ಮಗುವಿನ ಮುಗ್ದ ನಗು-ಅಳುಗಳ ಸಂತಸದ ಕ್ಷಣಗಳು. ಬರಹವನ್ನು ಸಾಧನೆಯಂತೆ ಮುನ್ನಡೆಸಿದಾಗ ಬರಹಗಾರ ಓದುಗರನ್ನು ಮುಟ್ಟಿ ಗೆಲ್ಲುತ್ತಾನೆ. ರವಿ ನಾಯ್ಕಾಪು ಅವರ ಬರಹಗಳು ಸೆಳೆದು ಆಕರ್ಷಿಸುತ್ತದೆ ಎಂದು ಕಸಾಪ ದಕ್ಷಿಣ ಕನ್ನಡ ಮಾಜಿ ಜಿಲ್ಲಾಧ್ಯಕ್ಷ, ಧಾರ್ಮಿಕ, ಸಾಂಸ್ಕøತಿಕ ನೇತಾರ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಬಳೆ ನಾರಾಯಣಮಂಗಲದ ಶ್ರೀಚೀರುಂಭಾ ಭಗವತಿ ದೇವಾಲಯದಲ್ಲಿ ಬುಧವಾರ ಸಂಜೆ ಲೇಖಕ ರವಿ ನಾಯ್ಕಾಪು ಅವರನ್ನು ಅಭಿನಂದಿಸಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿವಿಧ ಆಯಾಮಗಳಲ್ಲಿ ರವಿ ನಾಯ್ಕಾಪು ಅವರ ಬರಹಗಳು ಗಡಿನಾಡು ಕಾಸರಗೋಡಿನ ಭಾಷಾ ಗರಿಮೆಯೊಂದಿಗೆ ವಿಶಿಷ್ಟವೆನಿಸುತ್ತದೆ. ಭಗವತಿಯ ಸನ್ನಿಧಿಯಲ್ಲಿ ವ್ಯಕ್ತಿಯನ್ನು ಮೀರಿ ಶಕ್ತಿಯಾಗಿರುವ ಭಗವತಿ ನಮ್ಮನ್ನು ಇಂತಹದೊಂದು ಸಮಾರಂಭಕ್ಕೆ ಕರೆತಂದಿರುವುದು ನವರಾತ್ರಿಯ ಪರ್ವ ಸಂದರ್ಭ ವಿಶೇಷವಾದುದು. ಸತ್ಪಥದ ಜೀವನ ನಮ್ಮಲ್ಲಿರುವಂತೆ ಭಗವಂತ ಅನುಗ್ರಹಿಸಲಿ. ಅಕ್ಷರ ಪಯಣ ಮುನ್ನಡೆಯಲಿ ಎಂದವರು ಶುಭಹಾರೈಸಿದರು.
ಧಾರ್ಮಿಕ ಮುಂದಾಳು, ಪ್ರವಚನಕಾರ ಮುರಳೀಧರ ಯಾದವ್ ನಾಯ್ಕಾಪು ಶುಭಹಾರೈಸಿ ಮಾತನಾಡಿದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಚಾಲಕ ಡಾ.ಕೆ.ವಾಮನ ರಾವ್ ಬೇಕಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಧಾನ ಕರ್ಮಿಗಳಾದ ಚಂದ್ರಶೇಖರ ಚೆಟ್ಟಿಯಾರ್, ಕೃಷ್ಣ ಉಪಸ್ಥಿತರಿದ್ದರು.
ಈ ಸಂದರ್ಭ ರವಿ ನಾಯ್ಕಾಪು-ದಂಪತಿಗಳನ್ನು ಪ್ರದೀಪ್ ಕುಮಾರ್ ಕಲ್ಕೂರ ಅಭಿನಂದಿಸಿದರು. ರವಿ ನಾಯ್ಕಾಪು ಸ್ವಾಗತಿಸಿ ವಂದಿಸಿದರು. ಪುರುಷೋತ್ತಮ ಭಟ್.ಕೆ. ಕಾರ್ಯಕ್ರಮ ನಿರೂಪಿಸಿದರು.




.jpg)
.jpg)
