ಬದಿಯಡ್ಕ: ಭೂಮಿಯಲ್ಲಿರುವ ಸಕಲ ಜೀವರಾಶಿಗಳೂ ಕ್ರೀಡೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತವೆ. ನಮ್ಮ ಪರಿಸರದಲ್ಲಿ ಕಂಡುಬರುವ ಎಲ್ಲ ಪ್ರಾಣಿಪಕ್ಷಿಗಳೂ ಕ್ರೀಡೆಯಿಂದ ಆನಂದವನ್ನು ಪಡುವುದನ್ನು ನಾವು ಕಾಣಬಹುದು. ಕ್ರೀಡೆ ದೈಹಿಕ ಮತ್ತು ಮಾನಸಿಕ ಚಟುವಟಿಕೆಯಾಗಿದೆ ಎಂದು ನಿವೃತ್ತ ಕ್ರೀಡಾ ಶಿಕ್ಷಕ ವಿಶ್ವೇಶ್ವರ ಪಿ. ಮಾಡಾವು ಅಭಿಪ್ರಾಯಪಟ್ಟರು.
ಶುಕ್ರವಾರ ಬೆಳಗ್ಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಕ್ರೀಡೋತ್ಸವ 2025ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಕುನಾಯಿಗಳು, ಬೆಕ್ಕು, ಮೊಲ, ಆಡು, ದನಗಳು ಆಟ ಆಡುತ್ತಾ ಆನಂದ ಪಡುವುದನ್ನು ನಾವು ಕಾಣುತ್ತೇವೆ. ಕ್ರೀಡಾಕ್ಷೇತ್ರಕ್ಕೆ ನೀಡುವ ಸಹಕಾರ, ಇಂದಿನ ಮಕ್ಕಳು ತೊಡಗಿಸಿಕೊಳ್ಳುವ ಉತ್ಸಾಹವು ಮುಂದಿನ ರಾಷ್ಟ್ರದ ಪ್ರಜೆಗಳು ಹೇಗೆ ಬೆಳೆಯಬೇಕು, ಬೆಳೆಸಿಕೊಳ್ಳಬೇಕು ಎಂಬ ಕಲ್ಪನೆಯನ್ನು ತೋರಿಸಿಕೊಡುವ ಚಟುವಟಿಕೆಗಳನ್ನು ನಾವು ಇಲ್ಲಿ ಕಾಣಬಹುದು ಎಂದು ತಿಳಿಸಿದ ಅವರು ಶಾಲೆಯ ಶಿಸ್ತು, ಮಕ್ಕಳ ಕ್ರೀಯಾಶೀಲತೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುಧಾಕರ ರೈ ಬೆಳಿಂಜ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾ ಅಧ್ಯಾಪಕ ಶ್ಯಾಮಕೃಷ್ಣ ಪ್ರಕಾಶ ಮುಂಡೋಳುಮೂಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಮಕ್ಕಳು ಉತ್ಸಾಹದಿಂದ ಸೋಲು ಗೆಲುವನ್ನು ಸಮಾನವಾಗಿ ಕಾಣುತ್ತಾ ಸವಾಲಿನ ರೀತಿಯಲ್ಲಿ ಸ್ಪರ್ಧೆಗಳನ್ನು ಸ್ವೀಕರಿಸಿ ಪರಸ್ಪರ ಸಹಕಾರ ಮನೋಭಾವದೊಂದಿಗೆ ಮುಂದುವರಿಯಬೇಕು. ಜೀವನದಲ್ಲಿ ಅಚ್ಚುಕಟ್ಟನ್ನು ಪಾಲಿಸಿದರೆ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುವ ಧೈರ್ಯ ಲಭಿಸುತ್ತದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಕ್ರೀಡಾ ಶಿಕ್ಷಕ ವಿನಯಪಾಲ್ ಹಾಗೂ ಅಧ್ಯಾಪಕ ವೃಂದದ ನೇತೃತ್ವದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಜರಗಿತು. ಮಾತೃಸಮಿತಿ ಅಧ್ಯಕ್ಷೆ ಶಾಲಿನಿ, ಆಡಳಿತ ಸಮಿತಿ ಸದಸ್ಯ ಮಧುಸೂದನ ತಿಮ್ಮಕಜೆ, ರಾಜಗೋಪಾಲ ಚಾಳಿತ್ತಡ್ಕ ಉಪಸ್ಥಿತರಿದ್ದರು.




.jpg)
