ಇದು ಪ್ರಜಾಪ್ರಭುತ್ವ ಮತ್ತು ಚುನಾವಣೆ ಪ್ರಕ್ರಿಯೆಗಳ ಪಾವಿತ್ರಕ್ಕೆ ನೇರವಾಗಿ ಸಂಬಂಧಿಸಿದೆ. ರಾಜಕೀಯ ಪಕ್ಷಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ಇದುವರೆಗೆ ಏಕೆ ಸೂಕ್ತ ಕಾನೂನು ಜಾರಿಗೊಳಿಸಿಲ್ಲ? ಎಂದು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯೋಗ, ಕಾನೂನು ಆಯೋಗ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಈ ಬಗ್ಗೆ ನವೆಂಬರ್ 3 ರೊಳಗೆ ಉತ್ತರ ನೀಡುವಂತೆ ಕೇಳಿದೆ.
ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಆದಾಯ ತೆರಿಗೆ ಇಲಾಖೆಯ ದಾಳಿಯ ಸಂದರ್ಭದಲ್ಲಿ, ಇಂಡಿಯನ್ ಸೋಶಿಯಲ್ ಪಾರ್ಟಿ ಮತ್ತು ಯುವ ಭಾರತ ಆತ್ಮನಿರ್ಭರ ದಳ ಎಂಬ ಎರಡು ಪಕ್ಷಗಳಿಂದ 500 ಕೋಟಿ ರೂಪಾಯಿಗಳ ನಕಲಿ ದೇಣಿಗೆ ಪ್ರಕರಣ ಬಯಲಾಗಿದೆ. ರಾಷ್ಟ್ರೀಯ ಸರ್ವ ಸಮಾಜ ಪಕ್ಷದ ಮೂಲಕ 271 ಕೋಟಿ ರೂಪಾಯಿಗಳ ವಹಿವಾಟು ಸಿಕ್ಕಿಬಿದ್ದಿದೆ. ಈ ಪಕ್ಷಗಳಿಂದ ಹವಾಲಾ ಮತ್ತು ದಲ್ಲಾಳಿಗಳ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿ ಮಾಡಲಾಗುತ್ತಿದೆ. ವಾಸ್ತವವಾಗಿ ಅವರಿಗೆ ಚುನಾವಣೆಗಳೊಂದಿಗೆ ಯಾವುದೇ ಸಂಬಂಧವಿಲ್ಲ.
ನ್ಯಾಯವಾದಿ ಉಪಾಧ್ಯಾಯ ಮಂಡಿಸಿದ ಅಂಶಗಳು:
1. ಸುಮಾರು ಶೇ. 90 ರಷ್ಟು ಪಕ್ಷಗಳು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರು ತೆರಿಗೆ ವಂಚಿಸುತ್ತಾರೆ ಮತ್ತು ಶೇ. 20 ವರೆಗೆ ದಲ್ಲಾಳಿ ಶುಲ್ಕ ವಿಧಿಸಿ ಕಪ್ಪುಹಣವನ್ನು ಬಿಳಿಯನ್ನಾಗಿ ಮಾಡಿಕೊಳ್ಳುತ್ತಾರೆ.
2. ದೇಶದಲ್ಲಿ 6 ರಾಷ್ಟ್ರೀಯ ಮತ್ತು 67 ಪ್ರಾದೇಶಿಕ ಪಕ್ಷಗಳಿವೆ. 2024 ರಲ್ಲಿ ದೇಶದಲ್ಲಿ 2 ಸಾವಿರ 800 ಕ್ಕೂ ಹೆಚ್ಚು ಪಕ್ಷಗಳಿದ್ದವು, ಅವುಗಳಲ್ಲಿ ಕೇವಲ 690 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದವು, ಅಂದರೆ ಹೆಚ್ಚಿನ ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ.
3. ಚುನಾವಣಾ ಆಯೋಗ ಈ ವರ್ಷ ಆಗಸ್ಟ್ ವರೆಗೆ ಅಂತಹ 334 ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ. ಇನ್ನೂ 2 ಸಾವಿರದ 520 ನೋಂದಾಯಿತ ಮಾನ್ಯತೆಯಿಲ್ಲದ ರಾಜಕೀಯ ಪಕ್ಷಗಳು ಉಳಿದಿವೆ.
4. ದೇಶದಲ್ಲಿ 2 ಸಾವಿರದ 764 ಮಾನ್ಯತೆ ಪಡೆಯದ ಪಕ್ಷಗಳಿವೆ. ಇವುಗಳಲ್ಲಿ ಶೇ. 73 ಕ್ಕಿಂತ ಹೆಚ್ಚು (2 ಸಾವಿರ 025) ಪಕ್ಷಗಳು ತಮ್ಮ ಆರ್ಥಿಕ ದಾಖಲೆಗಳನ್ನು ಸಾರ್ವಜನಿಕಗೊಳಿಸಿಲ್ಲ. ಉಳಿದ 739 ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳು ತಮ್ಮ ದಾಖಲೆಗಳನ್ನು ಸಾರ್ವಜನಿಕಗೊಳಿಸಿವೆ.




