HEALTH TIPS

ನಾಡಹಬ್ಬ ಮೈಸೂರು ದಸರಾಗೆ ಬಾನು ಮುಷ್ತಾಕ್ ರಿಂದ ವಿದ್ಯುಕ್ತ ಚಾಲನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ- 2025ಕ್ಕೆ ಖ್ಯಾತ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಸೋಮವಾರ ಬೆಳಗ್ಗೆ ವಿದ್ಯುಕ್ತ ಚಾಲನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮ್ಮುಖದಲ್ಲಿ ತಮ್ಮ ಹೃದಯ ಹಣತೆಯ ಮಂದಹಾಸದಿಂದಲೇ ಹಳದಿ ಹಸಿರು ಬಣ್ಣದ ಮೈಸೂರು ರೇಷ್ಮೆ ಸೀರೆ, ಮೈಸೂರು ಮಲ್ಲಿಗೆ ಮುಡಿದು ವೇದಿಕೆಗೆ ಆಗಮಿಸಿದ ಬಾನು ಮುಷ್ತಾಕ್, ಬೆಳ್ಳಿಯ ಪಲ್ಲಕ್ಕಿಯ ಸಿಂಹಾಸನದಲ್ಲಿ ಅಲಕೃಂತಗೊಂಡ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡಿದರು.

ಈ ವೇಳೆ ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಭಕ್ತಾದಿಗಳು ಬಾನು ಮುಷ್ತಾಕ್ ಮತ್ತು ಸಿದ್ಧರಾಮಯ್ಯರ ಪರ ಜಯಘೋಷ ಕೂಗಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಬಾನು ಮುಷ್ತಾಕ್ ರನ್ನು ಡೋಲು, ವಾದ್ಯ, ಚಂಡೆ ವಾದ್ಯ, ವೀರಗಾಸೆ ಕುಣಿತ, ಪಟದ ಕುಣಿತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು.

ಮೊದಲಿಗೆ ಚಾಮುಂಡಿ ಬೆಟ್ಟದ ಒಳಗೆ ಪ್ರವೇಶಿಸಿದ ಅವರು ಮಂಗಳಾರತಿ ಸ್ವೀಕರಿದರು. ನಂತರ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು.

ಈ ಸಂದರ್ಭ ಅವರಿಗೆ ದೇವಸ್ಥಾನದ ವತಿಯಿಂದ ಮಲ್ಲಿಗೆ ಹಾರ ಹಾಕಿ, ಫಲ ತಾಂಬೂಲ ನೀಡಿ ಸೀರೆಯನ್ನು ಉಡುಗೊರೆಯಾಗಿ ನೀಡಲಾಯಿತು. ಅವರ ಜೊತೆ ಪುತ್ರಿ ಜೊತೆಗಿದ್ದರು.

ದಸರಾ ಉದ್ಘಾಟನೆಗೆ ರವಿವಾರವೇ ಹಾಸನದಿಂದ ಮೈಸೂರಿಗೆ ಪೊಲೀಸ್ ಬೆಂಗಾವಲಿನಲ್ಲಿ ಆಗಮಿಸಿದ ಅವರನ್ನು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಲಾಗಿತ್ತು.

ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ:

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಹ್ವಾನವನ್ನು ವಿರೋಧಿಸಿ ಚಾಮುಂಡಿ ಚಲೋಗೆ ಕರೆ ನೀಡಿ ಪ್ರತಿಭಟನೆಗೆ ಮುಂದಾಗಿದ್ದ ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸವ ದಸರಾ ಉದ್ಘಾಟನೆಯಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಎಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದರು.

ಸಚಿವರಾದ ಕೆ.ಎಚ್.ಮುನಿಯಪ್ಪ, ಕೆ.ವೆಂಕಟೇಶ್, ಶಿವರಾಜ್ ಎಸ್.ತಂಗಡಗಿ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಡಿ.ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ವಿವೇಕಾನಂದ, ಮಂಜೇಗೌಡ, ಡಾ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ ಸ್ವಾಗತಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries