HEALTH TIPS

ಭಾರತ-ಯುಎಇ ನಡುವಿನ CEPA ಒಪ್ಪಂದದಿಂದ ದಾಖಲೆ ಮಟ್ಟದ ವ್ಯಾಪಾರ ಸಹಭಾಗಿತ್ವ : UIBC-UC ಅಧ್ಯಯನ ವರದಿ

ದುಬೈ: ಯುಎಇ-ಇಂಡಿಯಾ ಬಿಝಿನೆಸ್ ಕೌನ್ಸಿಲ್ - ಯುಎಇ ಶಾಖೆ (UIBC-UC) ಬಿಡುಗಡೆ ಮಾಡಿದ ಅಧ್ಯಯನ ವರದಿಯು, ಭಾರತ-ಯುಎಇ ನಡುವಿನ "ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ" (ಸಿಇಪಿಎ) ಭಾರತ ಮತ್ತು ಯುಎಇ ದೇಶಗಳ ಆರ್ಥಿಕ ಸಂಬಂಧಗಳಲ್ಲಿ ಮಾಡಿದ ಬದಲಾವಣೆಗಳನ್ನು ವಿವರಿಸಿದೆ.

ಈ ವರದಿಯಲ್ಲಿ ವ್ಯಾಪಾರ, ಹೂಡಿಕೆ ಮತ್ತು ಹೊಸ ಕ್ಷೇತ್ರಗಳಲ್ಲಿ ಆರ್ಥಿಕ ಪಾಲುದಾರಿಕೆ ಒಪ್ಪಂದದ (CEPA) ಪ್ರಾಯೋಗಿಕ ಪರಿಣಾಮಗಳ ಬಗ್ಗೆ ಹೇಳಲಾಗಿದೆ.

"ಸಹಕಾರದಲ್ಲಿನ ಶಕ್ತಿ: ಭಾರತ-ಯುಎಇ CEPA ಜಾಗತಿಕ ಸಾಮರ್ಥ್ಯವನ್ನು ಅನಾವರಣಗೊಳಿಸುವುದು" ("Strength in Synergy: Unlocking India-UAE CEPA Global Potential) ಎಂಬ ಶೀರ್ಷಿಕೆಯ ಈ ಅಧ್ಯಯನವನ್ನು ದುಬೈನಲ್ಲಿ ನಡೆದ ಮುಚ್ಚಿದ ಸಭೆಯ ನಂತರ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಯುಎಇ ವಿದೇಶಿ ವಾಪಾರ ಇಲಾಖೆ ಸಚಿವ ಡಾ. ಥಾನಿ ಬಿನ್ ಅಹ್ಮದ್ ಅಲ್ ಝಯೂದಿ ಹಾಗೂ ಹಿರಿಯ ಉದ್ಯಮಿಗಳು ಭಾಗವಹಿಸಿದ್ದರು.

ವರದಿಯಲ್ಲಿನ ಮುಖ್ಯಾಂಶಗಳು :

ದಾಖಲೆಯ ವ್ಯಾಪಾರ ಬೆಳವಣಿಗೆ : 2025ರ ಮೊದಲಾರ್ಧದಲ್ಲಿ ತೈಲವಲ್ಲದ ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರ 37.6 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಲುಪಿದೆ. ಇದು 2024ರ ಇದೇ ಅವಧಿಯೊಂದಿಗೆ ಹೋಲಿಸಿದರೆ 33.9% ಹೆಚ್ಚಾಗಿದೆ.

ಕ್ಷೇತ್ರವಾರು ವಿಸ್ತರಣೆ: ಸಿಇಪಿಎ ಒಪ್ಪಂದದ ನಂತರ ರತ್ನಗಳು ಮತ್ತು ಆಭರಣ, ಆಹಾರ ಸಂಸ್ಕರಣೆ, ದೂರಸಂಪರ್ಕ, ಹಸಿರು ಇಂಧನ ಮತ್ತು ಡಿಜಿಟಲ್ ಸೇವೆಗಳಲ್ಲಿ ಬೆಳವಣಿಗೆಯನ್ನು ತ್ವರಿತಗೊಳಿಸಿದೆ.

ಹೊಸ ಕ್ಷೇತ್ರಗಳು: ಈ ಒಪ್ಪಂದದ ಮೂಲಕ ಕೃತಕ ಬುದ್ಧಿಮತ್ತೆ (AI), ಬಾಹ್ಯಾಕಾಶ ತಂತ್ರಜ್ಞಾನ, ಸುಸ್ಥಿರ ಅಭಿವೃದ್ಧಿ ಮತ್ತು ಆರ್ಥಿಕ ಏಕೀಕರಣಕ್ಕೆ ಹೊಸ ಅವಕಾಶಗಳನ್ನು ಕಲ್ಪಿಸಿವೆ.

ಹೂಡಿಕೆ ಕೇಂದ್ರ: ಭಾರತೀಯ ಶ್ರೀಮಂತ ಉದ್ಯಮಿಗಳು ಮತ್ತು ಕುಟುಂಬ ಆಧಾರಿತ ಹೂಡಿಕೆ ಸಂಸ್ಥೆಗಳ ಪ್ರಮುಖ ತಾಣವಾಗಿ ಯುಎಇ ಮುಂದುವರಿಯುತ್ತಿದೆ. ಇದು ಜಂಟಿ ಯೋಜನೆಗಳು ಮತ್ತು ದೀರ್ಘಕಾಲಿಕ ಆರ್ಥಿಕ ಸಹಭಾಗಿತ್ವಕ್ಕೆ ದಾರಿ ಮಾಡಿಕೊಡುತ್ತಿದೆ.

ಯುಎಇ-ಇಂಡಿಯಾ ಬಿಸಿನೆಸ್ ಕೌನ್ಸಿಲ್ - ಯುಎಇ ಶಾಖೆಯ (UIBC-UC) ವರದಿ ಪ್ರಕಾರ, ಸಿಇಪಿಎ ಕೇವಲ ವ್ಯಾಪಾರ ಒಪ್ಪಂದವಲ್ಲ, ಇದು ದೀರ್ಘಕಾಲದ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರಕ್ಕಾಗಿರುವ ಒಂದು ನೀಲ ನಕ್ಷೆಯಾಗಿದೆ. ಭಾರತದ ಉತ್ಪಾದನೆ ಮತ್ತು ತಂತ್ರಜ್ಞಾನ ಶಕ್ತಿಗಳನ್ನು, ಯುಎಇಯ ಮೂಲಸೌಕರ್ಯ, ಹೂಡಿಕೆ ಸಾಮರ್ಥ್ಯ ಮತ್ತು ಜಾಗತಿಕ ಸಂಪರ್ಕಗಳೊಂದಿಗೆ ಸೇರಿಸುವ ಮೂಲಕ ಗಡಿಯಾಚೆಗಿನ ಸಹಕಾರದ ಮಾದರಿಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.

ವರದಿಯು ಶುದ್ಧ ಇಂಧನ, ಡಿಜಿಟಲ್ ಏಕೀಕರಣ, ಶಿಕ್ಷಣ, ಸಂಶೋಧನಾ ವ್ಯವಸ್ಥೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಆಳವಾದ ಸಹಕಾರವನ್ನು ಶಿಫಾರಸು ಮಾಡಿದೆ. ಜೊತೆಗೆ BRICS, G20 ಮತ್ತು ಭಾರತ- ಮಧ್ಯಪ್ರಾಚ್ಯ -ಯೂರೋಪ್ ಆರ್ಥಿಕ ಕಾರಿಡಾರ್ (IMEEC) ಮುಂತಾದ ಬಹುಪಕ್ಷೀಯ ವೇದಿಕೆಗಳಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸುವಂತೆ ಸೂಚಿಸಿದೆ.

ಕೈಗಾರಿಕೆ, ನೀತಿ ಸಂಬಂಧಗಳು :

ಈ ಸಭೆಯಲ್ಲಿ ಎರಡೂ ದೇಶಗಳ ಉನ್ನತ ಅಧಿಕಾರಿಗಳು, ಯುಎಇ-ಇಂಡಿಯಾ ಬಿಸಿನೆಸ್ ಕೌನ್ಸಿಲ್ - ಯುಎಇ ಶಾಖೆಯ ಸದಸ್ಯರು, ಪ್ರಮುಖ ಉದ್ಯಮಿಗಳಾದ ಫೈಝಲ್ ಕೊಟ್ಟಿಕೊಲ್ಲನ್, ರಿಝ್ವಾನ್ ಸೂಮರ್, ಮೇಜರ್ ಜನರಲ್ (ನಿವೃತ್ತ) ಶರಫುದ್ದೀನ್ ಶರಫ್ ಹಾಗೂ ಪ್ರಮುಖ ಕಂಪೆನಿಗಳ ಮಂಡಳಿ ಸದಸ್ಯರು ಭಾಗವಹಿಸಿದ್ದರು.

UIBC-UC ಅಧ್ಯಕ್ಷ ಫೈಝಲ್ ಕೊಟ್ಟಿಕೊಲ್ಲನ್ ಮಾತನಾಡಿ, CEPA ಈಗ ಕೇವಲ ವ್ಯಾಪಾರ ಒಪ್ಪಂದವಲ್ಲ, ಇದು ಭವಿಷ್ಯದ ನೀಲ ನಕ್ಷೆಯಾಗಿದೆ. ಈ ಒಪ್ಪಂದವು ರಾಜಕೀಯ ಇಚ್ಛಾಶಕ್ತಿ, ಅಂತರಾಷ್ಟ್ರೀಯ ಸಹಕಾರ, ನಾವೀನ್ಯತೆ ಮತ್ತು ಜಾಗತಿಕ ನಾಯಕತ್ವದ ಮಾದರಿಯನ್ನು ನಿರ್ಮಿಸಲು ಸಹಕಾರಿಯಾಗಿದೆ ಎಂದು ಹೇಳಿದರು.

UIBC-UC ಅಧ್ಯಯನವು CEPA ಒಪ್ಪಂದವನ್ನು ಭಾರತ-ಯುಎಇ ದ್ವಿಪಕ್ಷೀಯ ವ್ಯಾಪಾರ, ವಿವಿಧ ಕ್ಷೇತ್ರಗಳ ವಿಸ್ತರಣೆ ಮತ್ತು ಕಾರ್ಯತಂತ್ರ ಸಹಕಾರಕ್ಕೆ ಪ್ರಮುಖವೆಂದು ಗುರುತಿಸಿದೆ. ನೀತಿ ನಿರೂಪಕರು, ಹೂಡಿಕೆದಾರರು ಮತ್ತು ಉದ್ಯಮಗಳಿಗೆ ಭಾರತ-ಯುಎಇ ಸಹಭಾಗಿತ್ವದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಇದು ಉಪಯುಕ್ತ ಮಾರ್ಗಸೂಚಿಗಳನ್ನು ನೀಡುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries