ಮಧೂರು : ಉಳಿಯತ್ತಡ್ಕದಲ್ಲಿರುವ ಸಿರಿಬಾಗಿಲು ಸರ್ಕಾರಿ ವೆಲ್ಫೆರ್ ಶಾಲೆಯನ್ನು ಭಡ್ತಿಗೊಳಿಸಬೇಕೆಂದು ಆಗ್ರಹಿಸಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಝಕರಿಯ ಕುನ್ನಿಲ್ ನೇತೃತ್ವದಲ್ಲಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಯಿತು. ಶಾಲೆಯ ಪರಿಸರದಲ್ಲಿ ನಡೆದ ಸತ್ಯಾಗ್ರಹವನ್ನು ಹಿರಿಯ ಕವಿ, ಶಾಲಾ ಅಭಿವೃಧ್ಧಿ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ.ಕೆ. ಉಳಿಯತ್ತಡ್ಕ ಉದ್ಘಾಟಿಸಿದರು. ನೂರ ಆರು ವರ್ಷಗಳ ಹಿಂದೆ ದೀನ ದಲಿತ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲ್ಪಟ್ಟ ಸಿರಿಬಾಗಿಲು ಶಾಲೆ ಎಲ್.ಪಿ ಶಾಲೆಯಾಗಿಯೇ ಉಳಿದಿದ್ದು, ಮರಳಿ ಮರಳಿ ಬಂದ ಸರ್ಕಾರಗಳು ಅವಗಣಿಸುತ್ತಲೇ ಬಂದಿದೆ. ಹಲವಾರು ವರ್ಷಗಳಿಂದ ಇದರ ಭಡ್ತಿಗೆ ಆಗ್ರಹಿಸಿ ಸರ್ಕಾರಕ್ಕೆ ನೀಡಿದ ಮನವಿಗಳಿಗೆ ಯಾವುದೇ ಸ್ಪಂದನ ಲಭಿಸಿಲ್ಲ. ಸರ್ಕಾರದ ಕಣ್ಣುತೆರೆಸಲು ಮೊದಲ ಹಂತದ ಹೋರಾಟದಂಗವಾಗಿ ಶಾಲಾ ಪರಿಸರದಲ್ಲೇ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಮತ್ತು ಸದಸ್ಯರು, ಕೇರಳ ವ್ಯಾಪಾರಿ ವ್ಯವಸಾಯ ಏಕೋಪನ ಸಮಿತಿಯ ಪದಾಧಿಕಾರಿಗಳು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಸ್ಥಳೀಯ ಕ್ಲಬ್ ಗಳ ಸದಸ್ಯರು, ರಾಜಕೀಯ ಸಾಮಾಜಿಕ ಕ್ಷೇತ್ರದ ಹಲವರು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು. ಕವಿಗಳಾದ ರವೀಂದ್ರನ್ ಪಾಡಿ, ಎಂ.ಪಿ ಜಿಲ್ ಜಿಲ್ ಹೋರಾಟದ ಕವನಗಳನ್ನು ವಾಚಿಸಿದರು. ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಸಂಜೆ ವಿದ್ಯಾರ್ಥಿಗಳು ಸೀಯಾಳ ನೀಡಿ ಸತ್ಯಾಗ್ರಹಕ್ಕೆ ತೆರೆಎಳೆದರು. ಮಾತೃ ಸಂಘದ ಅಧ್ಯಕ್ಷೆ ಆಬಿದಾ ಪುಳ್ಕೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




.jpg)
