ಮಂಜೇಶ್ವರ: ಕಾರು ಖರೀದಿಸಿದ ಹಣ ನೀಡದೆ ವಂಚಿಸಿರುವುದಲ್ಲದೆ, ನಂತರ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಜೇಶ್ವರ ಹೊಸಬೆಟ್ಟು ಕಟ್ಟೆಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬವರ ದೂರಿನ ಮೇರೆಗೆ ಈ ಕೇಸು.
ಹೊಸಬೆಟ್ಟು ನಿವಾಸಿ ಅಹಮ್ಮದ್ ಸುಹೈಬ್, ಕಾಸರಗೋಡು ಕೂಡ್ಲು ನಿವಾಸಿಗಳಾದ ಅಬ್ದುಲ್ ರಿಸ್ವಾನ್, ಮಹಮ್ಮದ್ ಸಿನಾನ್, ಮಧೂರು ನಿವಾಸಿ ಅಶ್ಪಾಕ್ ಹಾಗೂ ಸೀತಾಂಗೋಳಿ ಸನಿಹದ ಮುಗು ನಿವಾಸಿ ಒಳಗೊಂಡಂತೆ ಐದು ಮಂದಿ ವಿರುದ್ಧ ಈ ಕೇಸು ದಾಖಲಾಗಿದೆ. ಈ ಐದೂ ಮಂದಿ ಮದುವೆಗಾಗಿ ಮಜೀದ್ ಅವರ ಕಾರನ್ನು ಖರೀದಿಸಿದ್ದು, ಈ ಸಂದರ್ಭ ಸ್ವಲ್ಪ ಹಣ ಮುಂಗಡವಾಗಿ ನೀಡಿ, ಉಳಿದ ಹಣ ಮದುವೆ ಕಳೆದು ನೀಡುವುದಾಗಿ ತಿಳಿಸಿದ್ದರು. ನಂತರ ಆರೋಪಿಗಳು ಕಾರಿನ ಹಣ ನೀಡದೆ, ತನಗೆ ಪ್ರಾಣ ಬೆದರಿಕೆಯೊಡ್ಡಿರುವುದಾಗಿ ಮಜೀದ್ ಅವರು ಕಾಸರಗೋಡು ಹೆಚ್ಚುವರಿಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಎಸ್‍ಪಿ ಮಂಜೇಶ್ವರ ಠಾನೆ ಪೊಲೀಸರಿಗೆ ನಿರ್ದೇಶ ನೀಡಿದ್ದಾರೆ.




