ಕಾಸರಗೋಡು: ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಬೇಕಾದ ಅಧಿಕೃತ ಕಡತ ಕಳೆದುಹೋದಲ್ಲಿ ತಕ್ಷಣ ಎಫ್‍ಐಆರ್ ದಾಖಲಿಸಬೇಕು ಎಂದು ರಾಜ್ಯ ಮಾಹಿತಿ ಆಯುಕ್ತ ವಕೀಲ ಟಿ.ಕೆ. ರಾಮಕೃಷ್ಣನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಾಹಿತಿ ಹಕ್ಕು ಆಯೋಗದ ವಿಚಾರಣೆಯಲ್ಲಿ ದೂರುಗಳನ್ನು ಪರಿಗಣಿಸಿ ಮಾತನಾಡಿದರು. ತಪ್ಪು ಮತ್ತು ಅಸ್ಪಷ್ಟ ಮಾಹಿತಿಯನ್ನು ಒದಗಿಸುವುದು ಮಾಹಿತಿಯನ್ನು ನಿರಾಕರಿಸುವುದಕ್ಕೆ ಸಮಾನವಾಗಿದೆ. ಮಾಹಿತಿ ಹಕ್ಕು ಕಾಯ್ದೆಯು ಪರೋಕ್ಷ ಪ್ರಜಾಪ್ರಭುತ್ವವನ್ನು ಗೋಚರಿಸುವಂತೆ ಮಾಡುವ ಪ್ರಯತ್ನದ ಒಂದು ಭಾಗವಾಗಿದೆ ಮತ್ತು ಕಾಯ್ದೆಯ ಉದ್ದೇಶಗಳು ಸಬಲೀಕೃತ ಜನತೆ ಮತ್ತು ಪಾರದರ್ಶಕ ಆಡಳಿತಕ್ಕೆ ಸಮಾನವಾಗಿದೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 20 ವರ್ಷಗಳು ಕಳೆದರೂ ಅಧಿಕಾರಿಗಳು ಇದರ ಮೌಲ್ಯವನ್ನು ಗಂಭೀರವಾಗಿ ಪರಿಗಣಿಸದಿರುವುದು ವಿಷಾದನೀಯ. ಕಾಯ್ದೆ ಬಗ್ಗೆ ಅಧಿಕಾರಿಗಳಿಗಿರುವ ನಿರ್ಲಕ್ಷ್ಯ ಧೋರಣೆ ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚಿನ ತರಬೇತಿ ನಡೆಸಲಾಗುವುದು. ಮಾಹಿತಿ ಹಕ್ಕು ಆಯೋಗದ ವಿಚಾರಣೆಯಲ್ಲಿ ಹಾಜರಾಗದ ಅಧಿಕಾರಿಗಳಿಗೆ ಸಮನ್ಸ್ ಕಳುಹಿಸಲಾಗುವುದು ಎಂದೂ ಆಯುಕ್ತರು ತಿಳಿಸಿದರು. ರಾಜ್ಯ ಮಾಹಿತಿ ಹಕ್ಕು ಆಯೋಗದ ವಿಚಾರಣೆಯಲ್ಲಿ ಜಿಲ್ಲೆಯಲ್ಲಿ 15 ದೂರುಗಳು ಲಭಿಸಿದ್ದು, ಇದರಲ್ಲಿ 13 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.





