ಕಾಸರಗೋಡು: ವಿಶ್ವ ಕರಾವಳಿ ಸ್ವಚ್ಛತಾ ದಿನಾಚರಣೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ ವಿದ್ಯಾರ್ಥಿಗಳು ಇತಿಹಾಸ ಪ್ರಸಿದ್ಧ ಪ್ರವಾಸೋದ್ಯಮ ತಾಣ ಬೇಕಲ ಸಮುದ್ರದಡವನ್ನು ಸ್ವಚ್ಛಗೊಳಿಸಿದರು.
'ಸ್ವಚ್ಛ ಸಾಗರ್, ಸುರಕ್ಷಿತ್ ಸಾಗರ್' ಎಂಬ ಸಂದೇಶದೊಂದಿಗೆ ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್)ಹಾಗೂ ಕರಾವಳಿ ಸಂಶೋಧನಾ ಕೇಂದ್ರ (ಎನ್‍ಸಿಸಿಆರ್) ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೇಕಲ್ ರೆಸಾರ್ಟ್ ಅಭಿವೃದ್ಧಿ ನಿಗಮ (ಬಿಆರ್‍ಡಿಸಿ), ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಕೌನ್ಸಿಲ್ (ಡಿಟಿಪಿಸಿ), ಪೆರಿಯಡುಕ್ಕ ಎಂಪಿ ಇಂಟನ್ರ್ಯಾಷನಲ್ ಸ್ಕೂಲ್, ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಶುಚೀಕರಣದ ಮೂಲಕ ಒಂದು ಟನ್ ತ್ಯಾಜ್ಯ ಸಂಗ್ರಹಿಸಲಾಗಿದ್ದು, ಇದರಲ್ಲಿ 368 ಕೆಜಿ ಪ್ಲಾಸ್ಟಿಕ್ ಹಾಗೂ ಉಳಿದವುಗಳಲ್ಲಿ ಕಾಗದ, ಗಾಜು, ಲೋಹ, ಬಟ್ಟೆ ಮತ್ತು ರಬ್ಬರ್ ತ್ಯಾಜ್ಯ ಒಳಗೊಂಡಿತ್ತು.
ಸಂಗ್ರಹಿಸಲಾದ ತ್ಯಾಜ್ಯವನ್ನು ವಿಂಗಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸುವ ನಿಟ್ಟಿನಲ್ಲಿ ಮಹ್ಯುಬಾ ಇಕೋ ಸೊಲ್ಯೂಷನ್ಸ್‍ಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಬೀಚ್‍ನಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತೆಯ ಮಹತ್ವವನ್ನು ಎತ್ತಿ ತೋರಿಸುವ ಮರಳು ಶಿಲ್ಪವನ್ನು ರಚಿಸಿದರು. ವಿಶ್ವ ವಿದ್ಯಾಳಯದ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿಜಿನ್ ಪರಂಬತ್ ಶುಚಿತ್ವ ಪ್ರತಿಜ್ಞೆ ಬೋಧಿಸಿದರು. ಸ್ಟೂಡೆಂಟ್ಸ್ ವೆಲ್ಫೇರ್ ಡೀನ್ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ, ಮಹ್ಯುಬ ಇಕೋ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಕುಞಬ್ದುಲ್ಲಾ, ಬೇಕಲ ಬೀಚ್ ಪಾರ್ಕ್ ನಿರ್ದೇಶಕ ಮುಹಮ್ಮದ್ ಅನಸ್, ವಿಶ್ವ ವಿದ್ಯಾಲಯದ ಎನ್ನೆಸ್ಸೆಸ್ ಸಂಯೋಜಕ ಡಾ.ಎಸ್.ಅನ್ಬಳಗಿ, ತಾಂತ್ರಿಕ ಅಧಿಕಾರಿ ಡಾ.ವಿ.ಸುಧೀಶ ಉಪಸ್ಥಿತರಿದ್ದರು.





