HEALTH TIPS

ಜಿಎಸ್‌ಟಿ ಸುಧಾರಣೆ: ಮಂಥನ ಶುರು

 ವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿನ ತೆರಿಗೆ ಹಂತಗಳನ್ನು ಕಡಿಮೆ ಮಾಡಿ, ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಕೆಲಸವನ್ನು ಜಿಎಸ್‌ಟಿ ಮಂಡಳಿಯು ಬುಧವಾರ ಶುರುಮಾಡಿದೆ.  


ನಿತ್ಯ ಬದುಕಿನಲ್ಲಿ ಬಳಕೆ ಮಾಡುವ ಬೆಣ್ಣೆ, ‍ಪಾದರಕ್ಷೆ, ಉಡುಪುಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ.

ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚು ಮಾಡಬೇಕು ಹಾಗೂ ಭಾರತದ ಉತ್ಪನ್ನಗಳ ಮೇಲೆ ಅಮೆರಿಕವು ವಿಧಿಸಿರುವ ಭಾರಿ ‍ಪ್ರಮಾಣದ ಸುಂಕದ ಕೆಟ್ಟ ಪರಿಣಾಮಗಳನ್ನು ನಿಭಾಯಿಸಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ತೆರಿಗೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಜೀವ ವಿಮೆ ಹಾಗೂ ಆರೋಗ್ಯ ವಿಮೆ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡುವ ಬಗ್ಗೆ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಬುಧವಾರ ಚರ್ಚೆಯಾಯಿತು ಎಂದು ಮೂಲಗಳು ಹೇಳಿವೆ. ಸಭೆಯು ಗುರುವಾರವೂ ಮುಂದುವರಿಯಲಿದೆ. ಸಭೆಯ ತೀರ್ಮಾನಗಳನ್ನು ಗುರುವಾರ ಪ್ರಕಟಿಸುವ ಸಾಧ್ಯತೆ ಇದೆ.

ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ನೀಲನಕ್ಷೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಗೊತ್ತಾಗಿದೆ. ₹2,500ರವರೆಗಿನ ಪಾದರಕ್ಷೆಗಳು ಹಾಗೂ ಉಡುಪುಗಳಿಗೆ ತೆರಿಗೆ ಪ್ರಮಾಣವನ್ನು ಶೇ 5ಕ್ಕೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಗೆ ಒಪ್ಪಿಗೆ ನೀಡಿರುವಂತಿದೆ ಎಂದು ಮೂಲಗಳು ಹೇಳಿವೆ.

ಈಗಿರುವ ನಿಯಮಗಳ ಪ್ರಕಾರ ₹1,000ವರೆಗಿನ ಪಾದರಕ್ಷೆಗಳು ಹಾಗೂ ಉಡುಪುಗಳಿಗೆ ಮಾತ್ರ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಹೆಚ್ಚಿನ ಬೆಲೆಯ ಪಾದರಕ್ಷೆಗಳು ಮತ್ತು ಉಡುಪುಗಳ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

₹2,500ಕ್ಕಿಂತ ಹೆಚ್ಚಿನ ಬೆಲೆಯ ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆಗಳ ಮೇಲಿನ ತೆರಿಗೆಯನ್ನು ಶೇ 12ರ ಬದಲು ಶೇ 18ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.

ತೆರಿಗೆ ಬದಲಾವಣೆ ಸಾಧ್ಯತೆಗಳು

  • ನಿತ್ಯ ಬಳಕೆಯ, ಪ್ಯಾಕ್ ಮಾಡಿರದ ಆಹಾರ ವಸ್ತುಗಳಿಗೆ ಜಿಎಸ್‌ಟಿ ಅಡಿ ಶೂನ್ಯ ತೆರಿಗೆ ವಿಧಿಸಲಾಗುತ್ತಿದೆ. ಈ ಕ್ರಮವು ಮುಂದುವರಿಯಲಿದೆ. ಆದರೆ ಸಾಮಾನ್ಯವಾಗಿ ಬಳಕೆ ಮಾಡುವ ಪಾನೀಯಗಳು, ಬೆಣ್ಣೆ, ತುಪ್ಪ, ಗೋಡಂಬಿ ಮತ್ತು ಬಾದಾಮಿಯಂತಹ ಒಣಹಣ್ಣುಗಳು, ಮಾಂಸ, ಜಾಮ್ ಮತ್ತು ಫ್ರುಟ್‌ ಜೆಲ್ಲಿ, ಪೊಟ್ಟಣದಲ್ಲಿ ಸಿಗುವ ಕುರುಕಲು ತಿಂಡಿಗಳು, ಹಾಲು ಇರುವ ಪಾನೀಯಗಳು, ಐಸ್‌ಕ್ರೀಂ, ಬಿಸ್ಕತ್ತು, ಕಾರ್ನ್‌ ಫ್ಲೇಕ್ಸ್‌ಗೆ ತೆರಿಗೆ ಪ್ರಮಾಣವನ್ನು ಈಗಿನ ಶೇ 18ರ ಬದಲಿಗೆ ಶೇ 5ಕ್ಕೆ ನಿಗದಿಪಡಿಸುವ ಸಾಧ್ಯತೆ ಇದೆ.

  • ಹಲ್ಲುಪುಡಿ, ಕೆಲವು ಪಾತ್ರೆಗಳು, ಛತ್ರಿಗಳು, ಸೈಕಲ್ಲು, ಬಿದಿರಿನ ಪೀಠೋಪಕರಣಗಳು ಮತ್ತು ಬಾಚಣಿಗೆ, ಹಾಲುಣಿಸುವ ಬಾಟಲ್‌ಗಳ ಮೇಲಿನ ತೆರಿಗೆಯನ್ನು ಶೇ 12ರ ಬದಲು ಶೇ 5ಕ್ಕೆ ತಗ್ಗಿಸುವ ಸಾಧ್ಯತೆ ಇದೆ.

  • ಶಾಂಪೂ, ಟಾಲ್ಕಂ ಪೌಡರ್, ಟೂತ್‌ಪೇಸ್ಟ್‌, ಹಲ್ಲುಜ್ಜುವ ಬ್ರಶ್, ಸೋಪುಗಳ ಮೇಲಿನ ತೆರಿಗೆ ಪ್ರಮಾಣವು ಶೇ 18ರಷ್ಟು ಇರುವುದು ಶೇ 5ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.

  • ಸಿಮೆಂಟ್ ಮೇಲಿನ ತೆರಿಗೆಯು ಈಗ ಶೇ 28ರಷ್ಟು ಇದ್ದು, ಇದು ಶೇ 18ಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ.

  • ಪೆಟ್ರೋಲ್‌, ಎಲ್‌ಪಿಜಿ ಮತ್ತು ಸಿಎನ್‌ಜಿ ಚಾಲಿತ, 1,200 ಸಿ.ಸಿ.ವರೆಗಿನ ಎಂಜಿನ್‌ ಸಾಮರ್ಥ್ಯದ, 4 ಮೀಟರ್‌ಗಿಂತ ಕಡಿಮೆ ಉದ್ದದ ವಾಹನಗಳ ಮೇಲಿನ ತೆರಿಗೆಯು ಶೇ 28ರಷ್ಟು ಇರುವುದನ್ನು ಶೇ 18ಕ್ಕೆ ತಗ್ಗಿಸುವ ಬಗ್ಗೆ ಮಂಡಳಿಯು ಚರ್ಚಿಸಿದೆ.

  • ಅಲ್ಲದೆ, ಡೀಸೆಲ್‌ ಚಾಲಿತ, 1,500 ಸಿ.ಸಿ.ವರೆಗಿನ ಎಂಜಿನ್ ಸಾಮರ್ಥ್ಯದ, 4 ಮೀಟರ್‌ಗಿಂತ ಕಡಿಮೆ ಉದ್ದದ ವಾಹನಗಳ ಮೇಲಿನ ತೆರಿಗೆಯನ್ನು ಕೂಡ ಶೇ 18ಕ್ಕೆ ಇಳಿಸುವ ಬಗ್ಗೆ ಚರ್ಚೆ ಆಗಿದೆ.

  • 350 ಸಿ.ಸಿ.ವರೆಗಿನ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳು, ಹವಾನಿಯಂತ್ರಕಗಳು, ಪಾತ್ರೆ ತೊಳೆಯುವ ಯಂತ್ರಗಳು, ಟಿ.ವಿ.ಗಳಂತಹ ಗ್ರಾಹಕ ಬಳಕೆ ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ತೆರಿಗೆ ಪ್ರಮಾಣವನ್ನು ಶೇ 18ಕ್ಕೆ ತಗ್ಗಿಸುವ ಬಗ್ಗೆ ಚರ್ಚೆ ನಡೆದಿದೆ. ಇವುಗಳ ಮೇಲೆ ಈಗ ಶೇ 28ರಷ್ಟು ತೆರಿಗೆ ವಿಧಿಸಲಾಗುತ್ತಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries