ಕಾಸರಗೋಡು: ಜಿಲ್ಲೆಯ ಶಾಲೆಗಳಲ್ಲಿ ಕುಡಿಯುವ ನೀರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ರಾಜ್ಯ ಆಹಾರ ಸುರಕ್ಷತಾ ಆಯೋಗದ ಅಧ್ಯಕ್ಷ ಜಿನು ಉಮ್ಮನ್ ಜಕಾರಿಯಾ ತಿಳಿಸಿದ್ದಾರೆ.
ಅವರು ಆಹಾರ ಸುರಕ್ಷತಾ ಕಾಯ್ದೆ 2013ರ ಕಾಸರಗೋಡು ಜಿಲ್ಲೆಯ ಚಟುವಟಿಕೆಗಳಿಗೆ ಸಂಬಂಧಿಸಿ ನಾಯಮರ್‍ಮೂಲೆ ತನ್ಬಿಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಮಧ್ಯಾಹ್ನದ ಊಟದ ಯೋಜನೆಗೆ ಸಂಬಂಧಿಸಿದ ನೋಂದಣಿ ದಾಖಲೆಗಳನ್ನು ಪರಿಶಿಲಿಸಿ, ಮಧ್ಯಾಹ್ನದೂಟ ತಯಾರಿಸುವ ಅಡುಗೆ ಕೊಠಡಿಗೆ ಭೇಟಿ ನೀಡಲಾಯಿತು. ಕಚೇರಿ ಆವರಣದಲ್ಲಿ ಮತ್ತು ಅಡುಗೆಮನೆಯ ಬಳಿ ಅಳವಡಿಸಿದ ಆಹಾರಕ್ರಮದ ಪಟ್ಟಿಯ ಪ್ರದರ್ಶನವನ್ನು ಪರಿಶೀಲಿಸಿ, ಶಾಲೆಯ ಊಟದ ಕೊಠಡಿಯ ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿತು.
ಬೇಸಿಗೆ ರಜೆಯ ನಂತರ ಶಾಲಾ ಚಟುವಟಿಕೆ ಪುನರಾರಂಭಗೊಳ್ಳುವ ಮೊದಲು ಎಲ್ಲಾ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಶಿಕ್ಷಣ ಇಲಾಖೆ ಕೈಗೊಂಡಿರುವ ಕಾರ್ಯಗಳ ಬಗ್ಗೆ ಆಯೋಗ ತನ್ನ ಮೆಚ್ಚುಗೆ ವ್ಯಕ್ತಪಡಿಸಿತು. ನಂತರ ತೆಕ್ಕಿಲ್‍ನ 106 ನೇ ಸಂಖ್ಯೆಯ ಫೆರಿ ಸಾರ್ವಜನಿಕ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಕೆ-ಸ್ಟೋರ್‍ನ ಚಟುವಟಿಕೆಗಳನ್ನು ಪರಿಶೀಲಿಸಿದರು. ಕಾಸರಗೋಡು ತಾಲೂಕು ಸರಬರಾಜು ಅಧಿಕಾರಿ ಬಿ. ಕೃಷ್ಣ ನಾಯಕ್, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರ ಕಚೇರಿಯಲ್ಲಿ ಮಧ್ಯಾಹ್ನ ಆಹಾರ ಮೇಲ್ವಿಚಾರಕಿ ಇ.ಪಿ. ಉಷಾ, ಉಪಜಿಲ್ಲಾ ಶಿಕ್ಷಣ ಕಚೇರಿಯಲ್ಲಿ ಮಧ್ಯಾಹ್ನ ಊಟ ಅಧಿಕಾರಿ ಸಚಿನ್ ತಂಡದಲ್ಲಿದ್ದರು.





