ಬದಿಯಡ್ಕ: ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರಾಭಿವೃದ್ಧಿ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ತಳಮಟ್ಟದಲ್ಲಿ ಅಭಿವೃದ್ಧಿಯ ಸಾಕಾರತೆಯೇ ಸುಭಿಕ್ಷ ರಾಷ್ಟ್ರದ ಮೂಲವಾಗಿದ್ದು, ಮುಂಬರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಪ್ರಜ್ಞಾವಂತ ನಾಗರಿಕರು ಮತ ಚಲಾಯಿಸುವಲ್ಲಿ ಆಸಕ್ತರಾಗಬೇಕು ಎಂದು ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ನೀರ್ಚಾಲು ಸಮೀಪದ ಪುದುಕೋಳಿಯ ಗಂಗಾಧರ ಪೂವಳೆ ಅವರ ಮನೆಯಲ್ಲಿ ಮಂಗಳವಾರ ಸಂಜೆ ನಡೆದ ಬಿಜೆಪಿ ವಾರ್ಡ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಬದಿಯಡ್ಕ ಗ್ರಾ.ಪಂ. ಅಭಿವೃದ್ಧಿಯಲ್ಲಿ ಬಹಳಷ್ಟು ಹಿಂದುಳಿದಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಲೋಪಗಳು ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆಧುನಿಕ ಯುವ ಸಮೂಹ ವ್ಯವಸ್ಥೆಗಳಿಲ್ಲದೆ ಸಂಕಷ್ಟಕ್ಕೊಳಗಾಗಿದೆ. ಕೃಷಿ, ಪಶು ಸಂಗೋಪನೆ, ಆರೋಗ್ಯ ವಲಯಗಳಲ್ಲಿ ಸಮರ್ಪಕ ಕಾರ್ಯಯೋಜನೆಗಳನ್ನು ನಡೆಸಲಾಗುತ್ತಿಲ್ಲ. ಇವೆಲ್ಲದಕ್ಕೂ ಪರಿಹಾರ ಕಲ್ಪಿಸಲು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದವರು ತಿಳಿಸಿದರು.
ಹಿರಿಯ ಕಾರ್ಯಕರ್ತ ಪಿ.ಜಿ.ಶ್ರೀಕೃಷ್ಣ ಭಟ್ ಪುದುಕೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಸಾಮಾನ್ಯರಿಗೆ ಯೋಜನೆಗಳನ್ನು ತಲುಪಿಸುವಲ್ಲಿ ಸಮರ್ಥ ನಾಯಕರನ್ನು ಆರಿಸಿ ಕೊಡುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.
ಬ್ಲಾ.ಪಂ.ಸದಸ್ಯೆ ಅಶ್ವಿನಿ ಮೊಳೆಯಾರ, ಗ್ರಾ.ಪಂ.ಸದಸ್ಯೆ ಸ್ವಪ್ನಾ, ಶಂಕರ ಡಿ, ಪ್ರಭಾರಿಗಳಾದ ಮಹೇಶ್ ವಳಕ್ಕುಂಜ, ಮಧುಚಂದ್ರ ಮಾನ್ಯ ಉಪಸ್ಥಿತರಿದ್ದು ಮಾತನಾಡಿದರು. ಬಾಲಸುಬ್ರಹ್ಮಣ್ಯ ಭಟ್, ಸಂದೀಪ್ ಪುದುಕೋಳಿ, ನಾಗೇಶ್ ಪುದುಕೋಳಿ, ವಿಷ್ಣು ಶರ್ಮ, ಬಾಲಕೃಷ್ಣ ಮಲ್ಲಡ್ಕ, ಬಾಲಗೋಪಾಲ ಏಣಿಯರ್ಪು, ವಾಮನ ನಾಯ್ಕ್ ಪುದುಕೋಳಿ, ಮೊದಲಾದವರು ನೇತೃತ್ವ ವಹಿಸಿದ್ದರು.
ಈ ಸಂದರ್ಭ ಮನೆ ಸಂಪರ್ಕ ಸಹಿತ ವಿವಿಧ ವಿಭಾಗಗಳಿಗೆ ಸದಸ್ಯರನ್ನು ಆಯ್ಕೆಮಾಡಲಾಯಿತು. ರಜನಿ ಸಂದೀಪ್ ಸ್ವಾಗತಿಸಿ, ವಂದಿಸಿದರು.

.jpg)
.jpg)
