ಬದಿಯಡ್ಕ: ಜಿಲ್ಲೆಗೆ ಹೊಸದಾಗಿ ಮಂಜೂರುಗೊಂಡಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭಾರತೀಯ ವೈದ್ಯಕೀಯ ಮಂಡಳಿಯಿಂದ ಅನುಮೋದನೆ ಪಡೆದುಕೊಳ್ಳುತ್ತಿದ್ದಂತೆ ಎಂಬಿಬಿಎಸ್ ತರಗತಿಗೆ ಸೋಮವಾರ ಮೊದಲ ಪ್ರವೇಶಾತಿ ನಡೆದಿದೆ. ಈ ಮೂಲಕ ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಜಿಲ್ಲೆಯ ಜನತೆಯಲ್ಲಿ ಹೊಸ ಭರವಸೆ ಮೂಡುವಂತಾಗಿದೆ.
ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‍ಗೆ ಅಖಿಲ ಭಾರತ ವೈದ್ಯಕೀಯ ಪ್ರವೇಶ ಕೋಟಾದಲ್ಲಿ ಏಳು ಸೀಟುಗಳಿಗೆ ಭರ್ತಿಯಾಗಿದ್ದು, ಇದರಲ್ಲಿ ರಾಜಸ್ಥಾನದ ಅಲ್ವಾರ್ ನಿವಾಸಿ ಗುರ್ವಿಂದರ್ ಸಿಂಗ್ ಎಂಬ ವಿದ್ಯಾರ್ಥಿ ಸೋಮವಾರ ಮೊದಲ ಪ್ರವೇಶ ಪಡೆದುಕೊಂಡರು. ದೂರದ ಪಂಜಾಬಿನಿಂದ ಕೇರಳಕ್ಕೆ ಎಂಬಿಬಿಎಸ್ ಅಧ್ಯಯನಕ್ಕಾಗಿ ಬಂದ ಮೊದಲ ವಿದ್ಯಾರ್ಥಿಗೆ ಇದು ವಿಶೇಷ ಕ್ಷಣವಾಗಿತ್ತು. ಎಂಬಿಬಿಎಸ್‍ಗೆ ಸೇರ್ಪಡೆಗೊಮಡ ವಿದ್ಯಾರ್ಥಿ ಗುರ್ಮಿಂದರ್ ಸಿಂಗ್ ಅವರನ್ನು ವೈದ್ಯಕೀಯ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಸಂತೋಷ್ ಕುಮಾರ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಪ್ರವೀಣ್ ನೇತೃತ್ವದ ವೈದ್ಯರು ಹಾಗೂ ಸಿಬ್ಬಂದಿ ತಂಡ ಸಿಹಿ ನೀಡಿ ಸ್ವಾಗತಿಸಿದರು. ನಂತರ ಅವರ ಹಾಜರಾತಿಯನ್ನು ದಾಖಲಿಸಲಾಯಿತು. ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‍ನಲ್ಲಿ ಒಟ್ಟು 50 ಎಂಬಿಬಿಎಸ್ ಸೀಟುಗಳಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಶೀಘ್ರ ಎಂಬಿಬಿಎಸ್ ತರಗತಿ ಪ್ರಾರಂಭವಾಗಲಿದ್ದು, ಉಕ್ಕಿನಡ್ಕದ ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.






