ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಕೆಲವರು ನಡೆಸುತ್ತಿರುವ ಹಿಡನ್ ಅಜೆಂಡಾ ಬಗ್ಗೆ ಭಕ್ತಾದಿಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ..
ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಮಹಿಮೆ ಹಾಗೂ ಪರಂಪರೆ ಸಂರಕ್ಷಿಸುವ ಉದ್ದೇಶದಿಂದ ಕ್ಷೇತ್ರದ ವಿರುದ್ಧ ಮಾನಹಾನಿಕರ ಚಟುವಟಿಕೆಗಳ ವಿರುದ್ಧ ಕಾಸರಗೋಡಿನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಪ್ರತಿಭಟನಾ ಮೆರವಣಿಗೆಯ ಸ್ವಾಗತ ಸಮಿತಿ ರಚನಾ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು. ಧರ್ಮಾಧಿಕಾರಿಯನ್ನು ಗುರಿಯಾಗಿಸಿಕೊಂಡು ಕ್ಷೇತ್ರದ ಧಾರ್ಮಿಕ ವ್ಯವಸ್ಥೆಗೆ ಧಕ್ಕೆ ತಂದೊಡ್ಡುವ ಮೂಲಕ ಹಿಂದೂ ಸಂಸ್ಕøತಿಯನ್ನು ನಾಶಗೊಳಿಸುವ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾಸರಗೋಡಿನ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅಪಾರ ಕೊಡುಗೆ ಲಭಿಸುತ್ತಿದೆ. ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಭಕ್ತಾದಿಗಳಿಗೆ ನೋವುಂಟಾಗಿದೆ. ಇಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕಾಗಿರುವ ಇದೇ ಸಂಕಷ್ಟ ಮುಂದೆ ಇನ್ನೊಂದು ಕ್ಷೇತ್ರಕ್ಕೂ ತಟ್ಟುವ ಸಾಧ್ಯತೆಯಿದ್ದು, ಈ ಬಗ್ಗೆ ಭಕ್ತಾದಿಗಳು ಜಾಗೃತರಾಗಿರಬೇಕಾಗಿದೆ. ಕಾಸರಗೋಡಿನಲ್ಲಿ ಅ. 26ಕ್ಕೆ ನಡೆಯಲಿರುವ ಬೃಹತ್ ಸಾರ್ವಜನಿಕ ಪ್ರತಿಭಟನಾ ಮೆರವಣಿಗೆಯಲ್ಲಿ ಕನಿಷ್ಠ 50ಸಾವಿರ ಮಂದಿ ಪಾಲ್ಗೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಭೇಟಿ:
ಸೆ. 7ಕ್ಕೆ ಚಾತುರ್ಮಾಸ್ಯ ವ್ರತಾಚರಣೆ ಪೂರ್ತಿಗೊಳ್ಳಲಿದ್ದು, 8ರಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮ ಶ್ರೀ ಮಠದ ವತಿಯಿಂದ ಹಮ್ಮಿಕೊಂಡಿರುವುದಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಶ್ರೀಮಠದ ಭಕ್ತಾದಿಗಳನ್ನು ಒಳಗೊಂಡಂತೆ ವಾಹನ ಜಾಥಾದ ಮೂಲಕ ತೆರಳಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಾಗುವುದು. ಧರ್ಮರಕ್ಷಣಾ ಯಾತ್ರೆ ಹೆಸರಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ಭಾನುವಾರ ಶ್ರೀಎಡನೀರು ಮಠದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿವಿಧ ಕ್ಷೇತ್ರಗಳ ಮುಖಂಡರಾದ ಜಯದೇವ ಖಂಡಿಗೆ, ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ. ಎಂ ಹೇರಳ, ಪ್ರೊ. ಎ.ಶ್ರೀನಾಥ್, ಮಂಜುನಾಥ ಆಳ್ವ ಮಡ್ವ, ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಉಪಸ್ಥಿತರಿದ್ದರು. ರಾಜನ್ ಮುಳಿಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿವಿಧ ಧಾರ್ಮಿಕ ಮುಖಂಡರು, ಸಾಮಾಜಿಕ ನೇತಾರರು, ಕ್ಷೇತ್ರ, ಮಠ, ಮಂದಿರಗಳ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಕಾರ್ಯಕರ್ತರು ಪಾಲ್ಗೊಂಡಿದ್ದರು.





