ಕಾಸರಗೋಡು: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ (ರಿ). ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60 ನೇ ವರ್ಷದ ಜನ್ಮದಿನಾಚರಣೆ, ಮತ್ತು ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ. 4ರಂದು ಕನ್ನಡಗ್ರಾಂದಲ್ಲಿ ಜರುಗಲಿದೆ. ಅಂದು ಬೆಳಗ್ಗೆ 11ರಿಂದ ರಾತ್ರಿ 8ರ ವರೆಗೆ ಕೇರಳ- ಕರ್ನಾಟಕ ಸಾಹಿತ್ಯ, ಸಾಂಸ್ಕೃತಿಕ ಉತ್ಸವ ದೊಂದಿಗೆ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಭುವನೇಶ್ವರಿಯ ಛಾಯಾಚಿತ್ರದ ಅನಾವರಣದೊಂದಿಗೆ ಕನ್ನಡ ಗ್ರಾಮದಲ್ಲಿ ಶಿವರಾಮ ಕಾಸರಗೋಡು ಅವರ 60ನೇ ಜನ್ಮದಿನೋತ್ಸವ ಷಷ್ಟಬ್ಧಿ ಸಂಭ್ರಮದ ಕಾರ್ಯಕ್ರಮ ನಡೆಯುವುದು.
ಬೆಳಗ್ಗೆ 11ಕ್ಕೆ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ ನಡೆಯಲಿದೆ. ಈ ಸಂದರ್ಭ ಕಾಸರಗೋಡು ಕನ್ನಡಿಗ, ಗಡಿನಾಡು-ಹೊರನಾಡು ಕನ್ನಡಿಗ- ಕರ್ನಾಟಕ ಸರಕಾರ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯುವುದು. ಕೇರಳ ಕರ್ನಾಟಕ ರಾಜ್ಯದ 60 ಭಜನಾ ಸಂಕೀರ್ತನಾ ತಂಡಗಳ ಗಾಯಕ ಗಾಯಕಿ ಯರಿಂದ ಸಮೂಹ ದಾಸ ಸಂಕೀರ್ತನಾ ಕಾರ್ಯಕ್ರಮ ನಡೆಯುವುದು.
ಕರ್ನಾಟಕ ಏಕೀಕರಣ, ಕಾಸರಗೋಡು ವಿಲೀನೀಕರಣ ಕ್ಕಾಗಿ ಬಹುಕಾಲದಿಂದ ಕನ್ನಡ, ಕನ್ನಡಿಗರ ಹೋರಾಟಗಳಿಗೆ ಹಾಗೂ ಗಡಿನಾಡು ಕಾಸರಗೋಡಿನಲ್ಲಿ ಮಹಾಜನ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ ನಿರಂತರವಾಗಿ ದುಡಿದು, ಸೇವೆ ಸಲ್ಲಿಸಿ ಕೀರ್ತಿ ಶೇಷರಾದ 60 ಮಂದಿ ಕನ್ನಡ ಸತ್ಯಾಗ್ರಹಿಗಳು, ಕನ್ನಡ ಕಟ್ಟಾಳುಗಳು, ಕನ್ನಡ ಹೋರಾಟಗಾರರು, ಕನ್ನಡ ಸಂಘಟನೆಗಳ ಮುಖಂಡರು, ಕನ್ನಡದ ರಾಜಕೀಯ ಪಕ್ಷದ ನೇತಾರರ ಭಾವ ಚಿತ್ರವನ್ನು ಸಂಗ್ರಹಿಸಿ ಕನ್ನಡ ಗ್ರಾಮದಲ್ಲಿ ಪುಷ್ಪನಮನಗಳನ್ನು ಸಲ್ಲಿಸಲಾಗುವುದು.
ಸಂಜೆ 4ರಿಂದ 6ರ ತನಕ ಕರ್ನಾಟಕ ಸರಕಾರದ ಮಾಜಿ ಸಚಿವ ಜೆ .ಕೃಷ್ಣ ಪಾಲೆಮಾರ್ ಅವರ ಘನ ಅಧ್ಯಕ್ಷತೆಯಲ್ಲಿ ಶಿವರಾಮ ಕಾಸರಗೋಡು 60 ನೇ ವರ್ಷದ ಜನ್ಮದಿನಾಚರಣೆಯ ಅಭಿನಂದನಾ ಕಾರ್ಯಕ್ರಮ ನಡೆಯುವುದು. ಈ ಸಂದರ್ಭದಲ್ಲಿ ಶಿವರಾಮ ಕಾಸರಗೋಡು-60 ಅಭಿನಂದನಾ ಕೃತಿ ಬಿಡುಗಡೆ ಗೊಳ್ಳಲಿದೆ. ಸಮಾರಂಭದಲ್ಲಿ ಕೇರಳ- ಕರ್ನಾಟಕ ರಾಜ್ಯ ಸರ್ಕಾರದ ಸಚಿವರು, ಸಂಸದರು, ಶಾಸಕರು ಹಾಗೂ ಸರ್ಕಾರದ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮಠಾಧೀಶರು, ಸ್ವಾಮೀಜಿಗಳು, ಮತ್ತು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.





