ಬದಿಯಡ್ಕ: ಆಟಿ(ಆಷಾಢ) ಮಾಸದ ಬಳಿಕ ಬರುವ ಸೋಣೆ(ಸಿಂಹ) ಮಾಸ ತುಳುನಾಡಿಗೆ ಸಂಭ್ರಮದ ತಿಂಗಳು. ಹಬ್ಬದ ವಾತಾವರಣವನ್ನು ಸ್ವಾಗತಿಸಲು ಜೋಗಿ ಮನೆಮನೆಗಳಿಗೆ ಭೇಟಿ ನೀಡುವುದು ತೌಳವ ಪರಂಪರೆ.ಸೋಣೆ ತಿಂಗಳು ಹಬ್ಬಗಳ ಆರಂಭವನ್ನು ಸೂಚಿಸುವ ತಿಂಗಳು. ಈ ನಿಟ್ಟಿನಲ್ಲಿ ಗ್ರಾಮ ಗ್ರಾಮಗಳ ಮನೆಗಳಿಗೆ ಭೇಟಿ ನೀಡುವ ಜೋಗಿ ಹಿಂದಿನ ಅತಿ ಕಠಿಣ ಸವಾಲುಗಳಿಂದ ಮುಕ್ತರಾಗಿ ಮತ್ತೆ ನವ ಕಳೆಯಿಂದ ಭವಿಷ್ಯವನ್ನು ಸ್ವೀಕರಿಸುವ ಭರವಸೆಯಗಳೊಂದಿಗೆ ಶುಭಹಾರೈಸುತ್ತಾ ಮನೆ-ಮನಗಳ ದುಷ್ಟ ಶಕ್ತಿಗಳ ನಿಗ್ರಹಕಾರಕನಾಗಿ ಜೋಗಿ ಬೆಳಕಾಗುತ್ತಾನೆ.
ಆಧುನಿಕತೆಯ ಭರಾಟೆಯ ನಡುವೆಯೂ ಸಾಂಪ್ರದಾಯಿಕವಾಗಿ ತುಳುನಾಡಿನ ಅಲ್ಲಲ್ಲಿ ಈಗಲೂ ಜೋಗಿ ತಿರುಗಾಡುತ್ತಾನೆ. ಭಾನುವಾರ ನೀರ್ಚಾಲು ಸಮೀಪದ ಪುದುಕೋಳಿ ಪರಿಸರದಲ್ಲಿ ರಾಮ ಗೋಳಿಯಡ್ಕ ನೇತೃತ್ವದಲ್ಲಿ ಭೇಟಿ ನೀಡಿ ಜೋಗಿ ಕುಣಿತದ ಮೂಲಕ ಶುಭ ಹಾರೈಸಿದರು. ಜೋಗಿಯಾಗಿ ಭರತ್ ರಾಜ್ ಮುಂಡಿತ್ತಡ್ಕ ಜೊತೆಗಿದ್ದರು.



