ಕುಂಬಳೆ: ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾದ ಸರ್. ಎಂ. ವಿಶ್ವೇಶ್ವರಯ್ಯನವರ 165ನೇ ಜನ್ಮದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಸೀತಾಂಗೋಳಿಯ ವಕೀಲ ಥೋಮಸ್ ಡಿಸೋಜಾ ಅವರ ಕಾರ್ಯಾಲಯದಲ್ಲಿ ಸೋಮವಾರ ಸಂಜೆ ನಡೆಯಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿರಿಗನ್ನಡ ವೇದಿಕೆಯ ಅಧ್ಯಕ್ಷ, ಸಾಹಿತಿ, ಶಿಕ್ಷಣ ತಜ್ಞ ವಿ.ಬಿ ಕುಳಮರ್ವ ಅವರು ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯನವರ ಬದುಕು, ವ್ಯಕ್ತಿತ್ವ, ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಇಂಜಿನಿಯರಿಂಗ್ ಕ್ಷೇತ್ರದ ದಂತಕತೆಯಾಗಿರುವ ಸರ್‍ಎಂ.ವಿಶ್ವೇಶ್ವರಯ್ಯನವರು ಅಸಾಧ್ಯ ವಿಚಾರಗಳನ್ನು ಸಾಧಿಸಿ ತೋರಿಸಿದ ಮಹಾಮೇಧಾವಿ. ಭಾರತರತ್ನ ಸರ್ ಎಂ.ವಿ. ಅವರ ವೃತ್ತಿಕೌಶಲ್ಯ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಸೇವಾ ಮನೋಭಾವ ಯುವ ಪೀಳಿಗೆಗೆ ಸ್ಫೂರ್ತಿದಾಯಕ, ಮಾದರಿಯಾದುದು ಎಂದು ಅವರು ವಿವರಿಸಿದರು. ದಕ್ಷ ಇಂಜಿನಿಯರ್ ಆಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾಗಿ, ರಾಷ್ಟ್ರಾಭಿವೃದ್ಧಿಯ ಶಿಲ್ಪಿಯಾಗಿ ವಿಶ್ವೇಶ್ವರಯ್ಯನವರು ಸದಾ ಪ್ರಾತಃಸ್ಮರಣೀಯರು ಎಂದು ಅವರು ಹೇಳಿದರು.
ಕ.ಸಾ.ಪ.ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಅಧ್ಯಕ್ಷತೆ ವಹಿಸಿ, ನಾಡಗೀತೆಯನ್ನು ಹಾಡಿ ವಿಶ್ವೇಶ್ವರಯ್ಯನವರ ಬದುಕು-ಸಾಧನೆಗಳ ಬಗ್ಗೆ ಮೆಲುಕು ಹಾಕಿದರು.
ನ್ಯಾಯವಾದಿ, ಸಾಹಿತಿ ಥೋಮಸ್ ಡಿ'ಸೋಜ, ಸಾಹಿತಿ ಬಾಲ ಮಧುರಕಾನನ, ಪತ್ರಕರ್ತ ಪುರುಷೋತ್ತಮ ಭಟ್ ಶುಭಾಶಂಸನೆಗೈದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.




.jpg)
.jpg)
