ಕಾಸರಗೋಡು: ಜಿಲ್ಲೆಯ ಬೇತೂರ್‍ಪಾರದಲ್ಲಿ ಆಟೋರಿಕ್ಷಾದ ಹಿಂಭಾಗಕ್ಕೆ ಕಾರು ಡಿಕ್ಕಿಯಾಗಿ ಆಟೋದಲ್ಲಿದ್ದ ಮೂವರು ವಿದ್ಯಾರ್ಥಿಗಳು ಗಾಯಗೊಂಡ ದೃಶ್ಯ ಕಂಡು ವಿಚಲಿತನಾದ ಆಟೋ ಚಾಲಕ ಆ್ಯಸಿಡ್ ಸೇವಿಸಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಬೇತೂರ್‍ಪಾರ ಪಳ್ಳಂಜಿ ನಿವಾಸಿ ದಿ. ಶೇಖರನ್ ನಾಯರ್-ಕಮಲಾಕ್ಷಿ ದಂಪತಿ ಪುತ್ರ ಕೆ. ಅನೀಶ್(40)ಮೃತಪಟ್ಟ ಆಟೋ ಚಾಲಕ.
ಬೇತೂರ್‍ಪಾರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ತನ್ನ ಆಟೋರಿಕ್ಷಾದಲ್ಲಿ ಪಳ್ಳಂಜಿ ಭಾಗಕ್ಕೆ ಕರೆದೊಯ್ಯುವ ಹಾದಿಮಧ್ಯೆ ಕಾರೊಂದು ಆಟೋರಿಕ್ಷಾದ ಹಿಂಭಾಗಕ್ಕೆ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಪಳ್ಳಂಜಿ ನಿವಾಸಿಗಳು ಹಾಗೂ ಪ್ಲಸ್‍ವನ್ ತರಗತಿಯ ವಿದ್ಯಾರ್ಥಿಗಳಾದ ಶ್ರೀಹರಿ, ಅತುಲ್ ಹಾಗೂ ಆದರ್ಶ್ ಗಾಯಗೊಂಡಿದ್ದರು. ತಕ್ಷಣ ಇವರನ್ನು ಚೆಂಗಳದ ಇ.ಕೆ ನಾಯನಾರ್ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿದ್ಯಾರ್ಥಿಗಳು ಜೀವಾಪಾಯದಿಂದ ಪಾರಾಗಿದ್ದರು. ಆದರೆ, ವಿದ್ಯಾರ್ಥಿಗಳ ಗಾಯದ ಬಗ್ಗೆ ವಿಚಲಿತನಾದ ಅನೀಶ್ ಅವರು ಆಟೋರಿಕ್ಷಾದಲ್ಲಿದ್ದ ಆ್ಯಸಿಡ್ ತೆಗೆದು, ಅಪಘಾತ ನಡೆದ ಸ್ಥಳದಿಂದ ಅಲ್ಪ ದೂರ ತೆರಳಿ, ಸೇವಿಸಿದ್ದರು. ಗಂಭೀರಾವಸ್ಥೆಯಲ್ಲಿದ್ದ ಅನೀಶ್ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಅಪಘಾತದಿಂದ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳುಂಟಾಗಿರುವುದಾಗಿ ತಪ್ಪು ಗ್ರಹಿಕೆಯಿಂದ ಆತ್ಮಹತ್ಯೆಗೈದಿರಬೇಕೆಂದು ಸಂಶಯಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಬೇಡಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಆಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿಯಾಗಿದ್ದ ಕಾರಿನ ಚಾಲಕ, ಕಾಲೇಜೊಂದರ ಉಪನ್ಯಾಸಕ ಬೆನೆಟ್ ಎಂಬವರೂ ಗಾಯಗೊಂಡಿದ್ದು, ಇವರು ಕುತ್ತಿಕ್ಕೋಲಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ.

