ಕುಂಬಳೆ: ಶಾಲೆಗಳಲ್ಲಿ ನಡೆಯುವ ಕ್ರೀಡಾ ಮೇಳಗಳು ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಮಕ್ಕಳಿಗೆ ಸೂಕ್ತ ತರಬೇತಿ ಲಭಿಸುತ್ತಿಲ್ಲ. ಆಟಗಳು ಮತ್ತು ಸಾಂಸ್ಕøತಿಕ ಉತ್ಸವಗಳು ಈಗ ಪಿತೂರಿ ಆಧಾರಿತವಾಗಿವೆ ಎಂದು ಆರೋಪಿಸಿ ಕುಂಬಳೆ ಮಂಡಲಂ ಕಾಂಗ್ರೆಸ್ ಅಧ್ಯಕ್ಷ ರವಿ ಪೂಜಾರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಅನೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಇದನ್ನು ಪರಿಹರಿಸಲು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಶಾಲಾ ಅಧಿಕೃತರು ತರಬೇತಿ ನೀಡದೆ ಮಕ್ಕಳ ದೈಹಿಕ ಸಾಮಥ್ರ್ಯವನ್ನು ಪರೀಕ್ಷಿಸುತ್ತಿದ್ದಾರೆ. ಇದು ಹೆಚ್ಚಾಗಿ ವಿದ್ಯಾರ್ಥಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಶಾಲಾ ಕ್ರೀಡಾಕೂಟದ ಸಮಯದಲ್ಲಿ ವಿದ್ಯಾರ್ಥಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇದಕ್ಕೆ ಉದಾಹರಣೆಯಾಗಿದೆ ಎಂದು ರವಿ ಪೂಜಾರಿ ಹೇಳಿದರು.
ಹಿಂದೆ, ಶಾಲೆಗಳಲ್ಲಿ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಉತ್ಸವಗಳು ನಡೆದಾಗ, ಸಿದ್ಧತೆಗಳು ಮತ್ತು ತರಬೇತಿಯನ್ನು ತಿಂಗಳುಗಳ ಮುಂಚಿತವಾಗಿ ಮಾಡಲಾಗುತ್ತಿತ್ತು. ಇಂದು, ಅದು ಹಾಗಲ್ಲ, ದಿನಾಂಕವನ್ನು ನಿರ್ಧರಿಸಿ ಏಕಾಏಕಿ ಕಾಟಾಚಾರಕ್ಕೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಸಮರ್ಪಕ ತರಬೇತಿಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿಲ್ಲ. ಕನಿಷ್ಠ ಒಂದು ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ವರ್ಷಂಪ್ರತಿಯಂತೆ ನಡೆಸಬೇಕೆಂಬುದಷ್ಟೇ ಶಾಲಾ ಅಧಿಕೃತರ ನಿಲುವು. ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಮೇಲೇರಲು ಇದು ಅಡ್ಡಿಯಾಗಿದೆ ಎಂದು ರವಿ ಪೂಜಾರಿ ಗಮನಸೆಳೆದಿದ್ದಾರೆ.
ಶಾಲೆಗಳಲ್ಲಿ ಖಾಲಿ ಇರುವ ಕ್ರೀಡಾ ಶಿಕ್ಷಕರನ್ನು ನೇಮಿಸಲು ಮತ್ತು ಮಕ್ಕಳ ಉನ್ನತಿಗೆ ಅನುಕೂಲವಾಗುವ ರೀತಿಯಲ್ಲಿ ಶಾಲಾ ಕಲೋತ್ಸವಗಳನ್ನು ನಡೆಸಲು ಶಿಕ್ಷಣ ಇಲಾಖೆ ಮತ್ತು ಶಾಲಾ ಅಧಿಕೃತರು ಕ್ರಮ ಕೈಗೊಳ್ಳಬೇಕೆಂದು ರವಿ ಪೂಜಾರಿ ಒತ್ತಾಯಿಸಿದ್ದಾರೆ.




