ಬದಿಯಡ್ಕ: ಅಭಿವೃದ್ಧಿಯಲ್ಲಿ ಅಲ್ಲ, ಬೆಲೆ ಏರಿಕೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ ಮತ್ತು ಇದು ಸಿಎಂ ಪಿಣರಾಯಿ ವಿಜಯನ್ ಅವರ ಕೊಡುಗೆಯಾಗಿದೆ. ರಾಜ್ಯದ ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಕೇರಳವನ್ನು ದೊಡ್ಡ ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.
ಅವರು ಕುಂಬ್ಡಾಜೆ ಪಂಚಾಯಿಯ ಏತಡ್ಕದಲ್ಲಿ ನಡೆದ ಕುಂಬ್ಡಾಜೆ ಪಂಚಾಯಿತಿ ನಾಲ್ಕನೇ ವಾರ್ಡು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕೇರ ನಾಡಾದ ಕೇರಳದಲ್ಲಿ ತೆಂಗಿನಕಾಯಿಯ ಬೆಲೆ ಸಾಮಾನ್ಯ ಜನರಿಗೆ ಕೈಗೆಟುಕುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಿಂದಾಗಿ, ಓಣಂ ಸಮಯದಲ್ಲಿ ಮಲಯಾಳಿಗಳಿಗೆ ನಿರಾಶದಾಯಕವಾಗಿದೆ. ಜನರ ತೆರಿಗೆ ಹಣವನ್ನು ಖರ್ಚು ಮಾಡುವ ಮೂಲಕ ಸ್ಥಳೀಯಾಡಳಿತ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ರಾಜಕೀಯ ಪ್ರಚಾರ ನಡೆಸಲು ನವ ಕೇರಳ ಸಮ್ಮೇಳನದ ಮಾದರಿಯಲ್ಲಿ ಸೆಪ್ಟೆಂಬರ್‍ನಲ್ಲಿ ಅಭಿವೃದ್ಧಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಅಶ್ವಿನಿ ಆರೋಪಿಸಿದರು.
ಬದಿಯಡ್ಕ ಮಂಡಲ ಉಪಾಧ್ಯಕ್ಷ ಮತ್ತು ವಾರ್ಡ್ ಜನಪ್ರತಿನಿಧಿ ಕೃಷ್ಣ ಶರ್ಮಾ ಕಳೆದ 5 ವರ್ಷಗಳ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು.
ವಾರ್ಡ್ ಸಂಚಾಲಕ ರಾಮಣ್ಣ ಶೆಟ್ಟಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಬಿಜೆಪಿ ಕುಂಬ್ಡಾಜೆ ಪಂಚಾಯಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯೆ ಎಂ.ಶೈಲಜಾ ಭಟ್ ಮುಂತಾದವರು ಮಾತನಾಡಿದರು.





