ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನಿಕಟಪೂರ್ವ ಅಧ್ಯಕ್ಷ, ನಿವೃತ್ತ ಶಿಕ್ಷಣಾಧಿಕಾರಿ ಎಸ್. ವಿ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ ಕಾಸರಗೋಡಿನ ಕನ್ನಡ ಮಾಧ್ಯಮ ಅಧ್ಯಾಪಕ ಭವನ'ದಲ್ಲಿ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿವೃತ್ತ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೆ. ಪುಂಡರೀಕಾಕ್ಷ ಆಚಾರ್ಯ ಎಸ್. ವಿ ಭಟ್ ಅವರ ಸಂಸ್ಮರಣೆ ಮಾಡಿ, ಕನ್ನಡ ಭಾಷಾ ಅಧ್ಯಾಪಕರಾಗಿ, ಮುಖ್ಯ ಶಿಕ್ಷಕರಾಗಿ, ಉಪಜಿಲ್ಲಾ ಶಿಕ್ಷಣಾಧಿಕಾರಿಯಾಗಿ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎಸ್.ವಿ .ಭಟ್ ಅವರು ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ಸಲ್ಲಿಸಿದ ಸೇವೆ ಅನುಪಮ ಹಾಗೂ ಎಲ್ಲರಿಗೂ ಮಾದರಿಯಾದುದು. ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕದ ಅಧ್ಯಕ್ಷರಾಗಿ ದಶಕಗಳ ಕಾಲ ಕಾಸರಗೋಡಿನಲ್ಲಿ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕಾಸರಗೋಡಿನಲ್ಲಿ ಕನ್ನಡವನ್ನು ಸದಾ ಜೀವಂತವಾಗಿರಿಸುವುದರ ಜತೆಗೆ ವಿದ್ಯಾರ್ಥಿ ಮತ್ತು ಯುವ ಜನತೆಯಲ್ಲಿ ಕನ್ನಡಾಭಿಮಾನವನ್ನು ಮೂಡಿಸುವಲ್ಲಿ ಯಶಸ್ವಿಯಾಘಿದ್ದರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅವರು 'ಕಾಸರಗೋಡು ಮತ್ತು ಕನ್ನಡ ಪತ್ರಿಕೆಗಳು' ಹಾಗೂ ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ ಪದ್ಯಾಣ ಅವರು'ಕಾಸರಗೋಡಿನಲ್ಲಿ ಕನ್ನಡದ ಸ್ಥಿತಿಗತಿ'ಗಳ ಕುರಿತು ಮಾತನಾಡಿದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಸುಕೇಶ.ಎ, ಕ.ಸಾ.ಪ ಗಡಿನಾಡ ಘಟಕದ ಕೋಶಾಧಿಕಾರಿ ಡಾ.ಬಿ.ರಾಜಗೋಪಾಲ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪ್ರೊ. ಪಿ.ಎನ್ ಮೂಡಿತ್ತಾಯ, ಕನ್ನಡ ನೌಕರರ ಸಂಘದ ಮಾಜಿ ಅಧ್ಯಕ್ಷ ಜಯನಾರಾಯಣ ತಾಯನ್ನೂರು, ಸಾಹಿತಿ ವೈ .ಸತ್ಯನಾರಾಯಣ ಕಾಸರಗೋಡು, ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ ಕೆ, ಸಾಹಿತಿ, ಪತ್ರಕರ್ತ ರಾಧಾಕೃಷ್ಣ .ಕೆ ಉಳಿಯತ್ತಡ್ಕ, ನಿವೃತ್ತ ಡಿಡಿಇ ಡಿ.ಮಹಾಲಿಂಗೇಶ್ವರ ರಾಜ್, ಕಾಸರಗೋಡು ಬ್ಲೋಕ್ ಪಂಚಾಯಿತಿ ಸದಸ್ಯ ಸುಕುಮಾರ ಕುದ್ರೆಪ್ಪಾಡಿ, ಪೊಸಡಿಗುಂಪೆ ಪತ್ರಿಕೆಯ ಸಂಪಾದಕ ಜೆ .ಡಿ ಕಯ್ಯಾರು, ಬಿ. ನರಸಿಂಗರಾವ್ ಕಾಸರಗೋಡು, ನಿವೃತ್ತ ಮುಖ್ಯ ಶಿಕ್ಷಕಿ ಶೋಭಾರಾಣಿ ಕೆ, ಶಶಿಕಲಾ ಕಾಞಂಗಾಡು, ಡಾ.ಮಹೇಶ್ವರಿ.ಯು, ಬಿ. ರಾಮಮೂರ್ತಿ, ಸುಕುಮಾರ ಆಲಂಪಾಡಿ, ವಿಜಯಲಕ್ಷ್ಮಿ ಶಾನುಭೋಗ್, ಪುರುಷೋತ್ತಮ ಭಟ್ ಕೆ, ನವೀನ ಚಂದ್ರ ಮಾನ್ಯ, ಜಗದೀಶ.ಕೆ, ವಿಜಯ ಕುಮಾರಿ ಬಿ, ಕಮಲಾಕ್ಷ ಪ್ರಭು, ವಿಷ್ಣುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಚಿ ಬೇಳ ವಂದಿಸಿದರು.





