ಮಂಜೇಶ್ವರ: ಮಂಜೇಶ್ವರ ಶಾಸಕರ ಕಪಟ ನಾಟಕ ನಿಲ್ಲಿಸಬೇಕು, ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸದೆ ಇದ್ದುದ್ದು ಬೇಜವಾಬ್ದಾರಿತನದ ಪರಮಾವದಿ.ü ಅಭಿವೃದ್ಧಿಯಲ್ಲಿ ಮೂಲಭೂತ ಸೌಕರ್ಯದಲ್ಲಿ, ಅತಂತ್ಯ ಹಿಂದುಳಿದ ಪ್ರದೇಶವಾದ ಮಂಜೇಶ್ವರ ವಿಧಾನಸಭಾ ಕೇತ್ರದ ಅಭಿವೃದ್ಧಿಯ ರೂಪುರೆಷೆ ಸಿದ್ದಪಡಿಸಿ ಅಧಿವೇಶನದಲ್ಲಿ ಭಾಗವಹಿಸಿ ಯೋಜನೆಗಳನ್ನು ಅನುಷ್ಠಾನ ಮಾಡಬೇಕಾದ ಶಾಸಕರು ಅಧಿವೇಶನದಲ್ಲಿ ಭಾಗವಹಿಸದೆ ಇರುವುದು ಬೇಜವಾಬ್ದಾರಿ. ಮಂಜೇಶ್ವರದಲ್ಲಿ ಕಪಟ ನಾಟಕ ಮಾಡುವುದು ನಿಲ್ಲಿಸಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಸ್ತುವಾರಿಯ ವಕೀಲ ಸಜೀವನ್ ವಿ.ಕೆ. ಅಗ್ರಹಿಸಿದ್ದಾರೆ.
ಮೀಯಪದವಲ್ಲಿ ನಡೆದ ಬಿಜೆಪಿ ಪೈವಳಿಕೆ, ಮೀಂಜ, ವರ್ಕಾಡಿ ಪಂಚಾಯತಿ ಬಿಜೆಪಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಮಾತನಾಡಿ, ಎಡರಂಗ ಸರ್ಕಾರ ರಾಜ್ಯದಲ್ಲಿ ಸ್ಥಳೀಯಡಳಿತ ಪಂಚಾಯತಿಗಳಿಗೆ ನೀಡಬೇಕಾದ ಯೋಜನಾ ಮೊತ್ತಗಳಿಗೆ ಕಡಿವಾಣ ಹಾಕುತ್ತಿದೆ. ಇದರಿಂದ ಲೈಫ್ ಯೋಜನೆ, ಟೆಂಡರ್ ಪ್ರಕ್ರಿಯೆಗಳು ಸ್ತಬ್ದವಾಗಿದೆ. ಸರ್ಕಾರ ಉದ್ದೇಶ ಪೂರ್ವಕವಾಗಿ ಪಂಚಾಯತಿ ಕಾರ್ಯದರ್ಶಿಗಳನ್ನು, ಅಧಿಕಾರಿಗಳನ್ನು ನೇಮಕ ಮಾಡದೇ, ಬ್ಲಾಕ್ ಇಂಜಿನಿಯರ್ ಗಳಿಗೆ ಕಡ್ಡಾಯ ರಜೆ ನೀಡಿ ಯೋಜನೆಗಳು ಜಾರಿಯಾಗದಂತೆ ತಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಕಾರ್ಯದರ್ಶಿ ಲೋಕೇಶ್ ಎನ್, ಮುಖಂಡರಾದ ಎ.ಕೆ. ಕಯ್ಯಾರ್, ಪ್ರಸಾದ್ ರೈ. ಭಾಸ್ಕರ್ ಪೊಯ್ಯೆ, ನಾಗೇಶ್ ಬಳ್ಳೂರ್, ತುಳಸಿ ವರ್ಕಾಡಿ, ಪದ್ಮನಾಭ ರೈ, ಬೆಜ್ಜ ಚಂದ್ರಹಾಸ, ಸದಾಶಿವ ಚೇರಾಲು, ಸುಬ್ರಮಣ್ಯ ಭಟ್, ಜಯಶಂಕರ್ ಸತ್ಯಶಂಕರ ಮೊದಲಾದವರು ಉಪಸ್ಥಿತರಿದ್ದರು. ಕೆ.ವಿ. ಭಟ್ ಸ್ವಾಗತಿಸಿ, ಯತಿರಾಜ್ ಶೆಟ್ಟಿ ವಂದಿಸಿದರು.




.jpg)
