ನವದೆಹಲಿ :ಕೆನಡಾದ ವ್ಯಾಂಕೋವರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಖಲಿಸ್ತಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್, ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸವನ್ನು "ಮುತ್ತಿಗೆ ಹಾಕುವುದಾಗಿ" ಬೆದರಿಕೆ ಹಾಕಿದ ಕೆಲವು ದಿನಗಳ ನಂತರ, ಭಾರತದ ಪ್ರತಿಕ್ರಿಯೆಯ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿದ್ದಾರೆ.
ಭದ್ರತೆಯನ್ನು ಒದಗಿಸುವುದು ಕೆನಡಾ ಸರ್ಕಾರದ ಜವಾಬ್ದಾರಿ ಎಂದು ವಿದೇಶಾಂಗ ಸಚಿವಾಲಯ (MEA) ಶುಕ್ರವಾರ ಹೇಳಿದೆ.
ರಣಧೀರ್ ಜೈಸ್ವಾಲ್ ಮಾತನಾಡಿ, ನಾವು ರಾಜತಾಂತ್ರಿಕ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವುದು ಅಲ್ಲಿನ ದೇಶದ ಜವಾಬ್ದಾರಿಯಾಗಿರುತ್ತದೆ. ಈಗ ಕೆನಡಾ ಸರ್ಕಾರದ ಮೇಲೆ ಜವಾಬ್ದಾರಿ ಇದೆ. ನಾವು ಅವರೊಂದಿಗೆ ಸಮನ್ವಯ ಸಾಧಿಸಿದ್ದೇವೆ. ಈ ಕುರಿತು ಮಾತನಾಡಲಾಗುವುದು ಎಂದು ಅವರು ಹೇಳಿದರು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಅವರು ಸೆಪ್ಟೆಂಬರ್ 18 ರ ಗುರುವಾರ ತಮ್ಮ ಕೆನಡಾದ ಭದ್ರತಾ ಸಲಹೆಗಾರರ ಜೊತೆ ಮಾತನಾಡಿದ್ದಾರೆ. ಈ ಸಭೆಯು ದ್ವಿಪಕ್ಷೀಯ ಭದ್ರತಾ ಸಮಾಲೋಚನೆಗಳ ಭಾಗವಾಗಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 18 ರಂದು ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸವನ್ನು 12 ಗಂಟೆಗಳ ಕಾಲ "ಮುತ್ತಿಗೆ ಹಾಕುವುದಾಗಿ" SFJ ಬೆದರಿಕೆ ಹಾಕಿದ ಸಾರ್ವಜನಿಕ ನೋಟಿಸ್‌ನ ಕೆಲವು ದಿನಗಳ ನಂತರ ಜೈಸ್ವಾಲ್ ಅವರ ಹೇಳಿಕೆಗಳು ಬಂದಿವೆ. ನಗರದಲ್ಲಿರುವ ಇಂಡೋ-ಕೆನಡಿಯನ್ನರು ದೂತಾವಾಸಕ್ಕೆ ತಮ್ಮ ಭೇಟಿಯನ್ನು ಮರು ನಿಗದಿಪಡಿಸುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ಭಾರತದ ನಿಯೋಜಿತ ಹೈಕಮಿಷನರ್ ದಿನೇಶ್ ಕೆ ಪಟ್ನಾಯಕ್ ಅವರ ಮುಖದ ಮೇಲೆ ಗುರಿಯನ್ನು ಗುರುತಿಸಿರುವ ಚಿತ್ರವನ್ನು ಒಳಗೊಂಡ ಪೋಸ್ಟರ್ ಅನ್ನು SFJ ನೋಟಿಸ್ ಜೊತೆಗೆ ಪ್ರಸಾರ ಮಾಡಿತ್ತು.
2023 ರಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದಾರೆ ಎಂಬ ಆರೋಪದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟ ಒಂದು ವರ್ಷದ ನಂತರ ಇತ್ತೀಚಿನ ಬೆದರಿಕೆ ಬಂದಿದೆ. ಕಳೆದ ತಿಂಗಳು ಖಲಿಸ್ತಾನಿಗಳು ಕೆನಡಾದಲ್ಲಿರುವ ಹಿಂದೂ ದೇವಾಲಯದ ಮೇಲೆ ಗೀಚು ಬರಹವನ್ನು ಬರೆದಿದ್ದರು. ಅದನ್ನು ಭಾರತೀಯ ರಾಯಭಾರಿ ಕಚೇರಿ ಖಂಡಿಸಿತ್ತು.




