ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಚೇರಿಯ ರಾಷ್ಟ್ರೀಯ ಆರೋಗ್ಯ ಸಂಸ್ಥೆ, ಕಾಸರಗೋಡು ಸಾಮಾನ್ಯ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಪೋಷಕಾಹಾರ ಪ್ರದರ್ಶನ ಮೇಳ ಚಾಯೋತ್ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿತು. ದಿಶಾ ಉನ್ನತ ಅಧ್ಯಯನ ವೃತ್ತಿ ಮಾರ್ಗದರ್ಶನದ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಸಹಕಾರದೊಂದಿಗೆ ಪ್ರದರ್ಶನ ಆಯೋಜಿಸಲಾಗಿತ್ತು.
ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸಲು, ಪೌಷ್ಟಿಕ ತಿನಿಸು ಮತ್ತುಆರೋಗ್ಯಕರ ಆಹಾರಗಳನ್ನು ಪರಿಚಯಿಸುವುದು, ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಜೀವನಶೈಲಿಯನ್ನು ನಿಯಂತ್ರಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಈ ಪ್ರದರ್ಶನವನ್ನು ಆಯೋಜಿಸಿದೆ. ಆರೋಗ್ಯಕರ ಆಹಾರಗಳನ್ನು ಪರಿಚಯಿಸುವುದರ ಜೊತೆಗೆ, ಮಕ್ಕಳಿಗೆ ಪೌಷ್ಟಿಕ ತಿನಿಸು ಮತ್ತು ಪಾನೀಯ ಉಚಿತವಾಗಿ ನೀಡಲಾಯಿತು. ವಿಶೇಷವಾಗಿ ಸಜ್ಜುಗೊಳಿಸಲಾದ ಪ್ರದರ್ಶನ ಮೇಳವನ್ನು ಹೆಲ್ದೀ ಪ್ಲೇಟ್, ಮಳೆಬಿಲ್ಲು ನ್ಯೂಟ್ರಿಷನ್ ಮತ್ತು ಸ್ಮಾರ್ಟ್ ಸ್ನ್ಯಾಕ್ಸ್ ಕಾರ್ಯಕ್ರಮ ಆಯೋಜಿಸಿತ್ತು. ಎಕ್ಸ್‍ಪೆÇೀದಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಮಾಸಾಚರಣೆಯ ಅಂಗವಾಗಿ ವಿಚಾರ ಸಂಕಿರಣ ನಡೆಯಿತು. ಆರೋಗ್ಯ ಇಲಾಖೆ ಅಧೀನದಲ್ಲಿ ನಡೆದ ಮೇಳಕ್ಕೆ ಆಹಾರ ತಜ್ಞರಾದ ಶ್ರುತಿ ಕೆ, ಮೃದುಲಾ ಅರವಿಂದ್ ಮತ್ತು ಸುಚಿತ್ರಾ ಕೆ ನೇತೃತ್ವ ನೀಡಿದರು. ಎರಡು ದಿವಸಗಳ ಕಾಲ ನಡೆದ ಕಾರ್ಯಕ್ರಮದಲ್ಲಿ 8000 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ ವಿ ರಾಮದಾಸ್ ಹೇಳಿದರು.





