ಕಾಸರಗೋಡು: ವಿವಿಧ ಕಾರಣಗಳಿಂದ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಿದವರಿಗಾಗಿ ಜಿಲ್ಲೆಯಲ್ಲಿ ಸಾಕ್ಷರತಾ ಮಿಷನ್ ನಡೆಸುತ್ತಿರುವ ಸಾಕ್ಷರತಾ ಚಟುವಟಿಕೆ ದೇಶಕ್ಕೆ ಮಾದರಿಯಾಗಿರುವುದಾಗಿ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಅವರು ಜಿಲ್ಲಾ ಸಾಕ್ಷರತಾ ಮಿಷನ್ ಆಯೋಜಿಸಿದ್ದ ಸಾಕ್ಷರತಾ ಸಪ್ತಾಹ ಆಚರಣೆಯ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೃಷ್ಟಿಹೀನರಿಗೆ ಬ್ರೈಲ್ ಸಾಕ್ಷರತೆ, ಕನ್ನಡ ಭಾಷಿಕರಿಗೆ ಮಲಯಾಳಂ ಕಲಿಸುವ 'ಪಚ್ಚ ಮಲಯಾಳಂ' ಯೋಜನೆ, ಮಲಯಾಳಿಗಳಿಗೆ ಕನ್ನಡ ಕಲಿಸುವ ಯೋಜನೆ, ರಾಷ್ಟ್ರೀಯ ಸಾಕ್ಷರತಾ ಯೋಜನೆ, ಸಾಂವಿಧಾನಿಕ ಸಾಕ್ಷರತಾ ಸ್ಥಿತಿ., ಹಿಂದಿ ಭಾಷಿಕರಿಗೆ ಮಲಯಾಳಂ ಭಾಷೆಯನ್ನು ಸಾಕ್ಷರರಾಗಿ ಕಲಿಸುವ ಸಂಗಾತಿ ಯೋಜನೆ, ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಏಕೀಕರಣ, ಡಿಜಿಟಲ್ ಸಾಕ್ಷರತೆ, ಪರಿಶಿಷ್ಟ ವರ್ಗದವರಿಗಾಗಿ 'ಮುನ್ನಡೆ'ಮತ್ತು ಪರಿಶಿಷ್ಟ ಜಾತಿಗಳಿಗೆ 'ನವಚೇತನ'ಯೋಜನೆಯನ್ವಯ ನಾಲ್ಕನೇ ತರಗತಿ ಸಮಾನಾಂತರ ತರಗತಿಯ ಪಠ್ಯ ಕಲಿಸಲಾಗುತ್ತಿದ್ದು, ಇದು ಸಾಕ್ಷರ ಕೇರಳಕ್ಕೆ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. 1991ರಲ್ಲಿ ಸಂಪೂರ್ಣ ಸಾಕ್ಷರತಾ ಅಭಿಯಾನದಲ್ಲಿ ಅನಕ್ಷರಸ್ಥರಿಗೆ ಅಕ್ಷರ ಕಲಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್.ಬಾಬು, ಕೆ.ವಿ.ರಾಘವನ್ ಮಾಸ್ಟರ್, ಟಿ.ವಿ.ರಾಘವನ್ ಮಾಸ್ಟರ್, ಸಿಪಿವಿ.ವಿನೋದಕುಮಾರ್ ಮಾಸ್ಟರ್ ಹೈಯರ್ ಸೆಕೆಂಡರಿ ಸಮಾನಾಂತರ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಬ್ರೈಲ್ ಸಾಕ್ಷರತಾ ಶಿಕ್ಷಕ ಸತೀಶನ್ ಬೇವಿಂಜ, ಎಂ ಉಮೇಶನ್ ಮತ್ತು ಕಾಸರಗೋಡು ನಗರಸಭಾ ಸದಸ್ಯೆ ಆಯಿಷತ್ ಅಫಿಲಾ ಅವರನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಸನ್ಮಾನಿಸಿದರು. ಶಾಪ್ಸ್ ಏಂಡ್ ಕಮರ್ಶಿಯಲ್ ಎಸ್ಟಾಬ್ಲಿಶ್‍ಮೆಂಟ್ ಕಾರ್ಯನಿರ್ವಾಹಕ ಅಧಿಕಾರಿ ವಿ. ಅಬ್ದುಲ್ ಸಲಾಂ, ಜನಪ್ರತಿನಿಧಿಗಳಾದ ರಾಜನ್ ಪೆÇಯಿನಾಚಿ ಮತ್ತು ಟಿ.ಎಂ. ಜೈನುದ್ದೀನ್, ಪಿಟಿಎ ಅಧ್ಯಕ್ಷ ಉದಯಕುಮಾರ್, ಸಾಕ್ಷರತಾ ಪ್ರೇರಕ್ ತಂಗಮಣಿ, ಮತ್ತು ವಿದ್ಯಾರ್ಥಿ ನಾಯಕ ಶೆಫೀಕ್ ಉಪಸ್ಥಿತರಿದ್ದರು.





