HEALTH TIPS

ನೆಮ್ಮದಿಯ ಸಾವಿಗೂ ಕೊಳ್ಳಿ: ಹಿಂದೂ ರುದ್ರಭೂಮಿಯಲ್ಲಿ ಕಟ್ಟಡ ನಿರ್ಮಾಣ-ಮಾಲಿನ್ಯ ಸಂಗ್ರಹ: ಭಾರೀ ಜನಪ್ರತಿರೋಧ

ಬದಿಯಡ್ಕ: ಹಿಂದೂ ರುದ್ರಭೂಮಿಯನ್ನು ಮಾಲಿನ್ಯ ಸಂಗ್ರಹ ಕೇಂದ್ರವಾಗಿಸುವ ಗ್ರಾ.ಪಂ.ಆಡಳಿತದ ವಿರುದ್ಧ ಭಾರೀ ಜನಾಕ್ರೋಶ ಪ್ರತಿಭಟನೆ ವ್ಯಕ್ತವಾಗಿ ಸ್ವತಃ ಗ್ರಾ.ಪಂ.ಅಧಿಕೃತರೇ ಸ್ಥಳಕ್ಕೆ ಆಗಮಿಸಿ ಸಮಜಾಯಿಷಿ ನೀಡಿದ ಘಟನೆ ಸೋಮವಾರ ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ನಡೆದಿದೆ.

ಪುದುಕೋಳಿಯಲ್ಲಿ ದಶಕಗಳಿಂದ ಕಾರ್ಯಾಚರಿಸುವ ಹಿಂದೂ ರುದ್ರಭೂಮಿ ನಿವೇಶನದೊಳಗೆ ಕಳೆದ ಕೆಲವು ಕಾಲಗಳಿಂದ ಹಸಿರು ಕ್ರಿಯಾಸೇನೆಯ ಮೂಲಕ ಸಂಗ್ರಹಿಸಿದ ಮನೆ ತ್ಯಾಜ್ಯಗಳನ್ನು ಪೇರಿಸಿಟ್ಟಿದ್ದು, ಅದರ ಜೊತೆಗೆ ಇದೀಗ ರುದ್ರಭೂಮಿಯೊಳಗೆಯೇ ಹೊಸ ಕಟ್ಟಡ ನಿರ್ಮಿಸಲು ಜೆಸಿಬಿ ತರಿಸಿ ಕಾಮಗಾರಿ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಸ್ಥಳೀಯರು ರಂಗಕ್ಕಿಳಿದಿರುವರು.


ರುದ್ರಭೂಮಿ ಅಧಿಕೃತವಾಗಿ ನಾಲ್ಕು ಎಕ್ರೆ ವಿಸ್ತೀರ್ಣ ಹೊಂದಿದ್ದು, ಪ್ರಸ್ತುತ ಮೂರು ಎಕ್ರೆಗಳಷ್ಟು ಮಾತ್ರ ಲಭ್ಯವಿದೆ.ಉಳಿದ ಒಂದೆಕೆರೆ ನಿವೇಶನವನ್ನು ಗ್ರಾ.ಪಂ.ಅಧಿಕೃತರು ಬೇರೆ ಯೋಜನಾ ಅನುಷ್ಠಾನಕ್ಕೆ ವಶಕ್ಕೆ ಪಡೆದಿರುವರು. ಈ ಮಧ್ಯೆ ಕಳೆದ ಕೆಲವು ಕಾಲಗಳಿಂದ ಹಸಿರು ಕ್ರಿಯಾಸೇನೆ ಮನೆಮನೆಗಳಿಂದ ಸಂಗ್ರಹಿಸಿದ ಒಣ ಕಸಗಳನ್ನು ಇಲ್ಲಿಯ ಕಟ್ಟಡ ಸನಿಹ, ಹೊರಗಿನ ತೆರೆದ ಪ್ರದೇಶದಲ್ಲಿ ಎಸೆದಿರುವುದು ಕಂಡುಬಂದಿದೆ. ಈ ಮಧ್ಯೆ ಸ್ಥಳೀಯರ ದೂರಿನ ಮೇರೆಗೆ ರುದ್ರಭೂಮಿಯೊಳಗಿನ ಕಟ್ಟಡದಲ್ಲಿ ತ್ಯಾಜ್ಯರಾಶಿಯನ್ನು ಪೇರಿಸಿಡತೊಡಗಿದೆ. ಆದರೆ ಇದೀಗ ಹೊಸ ಕಟ್ಟಡ ನಿರ್ಮಾಣಕ್ಕೆ ಜೆಸಿಬಿಯಿಂದ ಅಗೆಯಲಾಗುತ್ತಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


ವಿಶಾಲ ವ್ಯಾಪ್ತಿಗೆ ಇದೊಂದೇ ರುದ್ರಭೂಮಿ:

ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಮಾನ್ಯ, ನೀರ್ಚಾಲು, ಪೆರಡಾಲ, ಕಾರ್ಮಾರು, ಬೇಳ, ಕನ್ನೆಪ್ಪಾಡಿ, ತಲ್ಪನಾಜೆಎರಟ್ಟಿಕಾಯಿರ ಮೊದಲಾದ ಪ್ರದೇಶಗಳಿಗೆ ಪುದುಕೋಳಿಯದೊಂದೇ ರುದ್ರಭೂಮಿ ಇದ್ದು, ದಿನನಿತ್ಯ 3 ರಿಂದ ನಾಲ್ಕು ಸಾವುಗಳ ಅಂತ್ಯಕ್ರಿಯೆಗಳು ಇಲ್ಲೇ ನಡೆಯುತ್ತಿದೆ. ಈಗಾಗಲೇ ಇಲ್ಲಿಯ ರುದ್ರಭೂಮಿಯೊಳಗಿನ ಬಹುತೇಕ ಸ್ಥಳಗಳೂ ಬಳಕೆಯಾಗಿದ್ದು, ಸ್ಥಳಾವಕಾಶದ ಕೊರತೆಯೂ ಇದೆ. ಈ ಮಧ್ಯೆ ಹಸಿರು ಕ್ರಿಯಾಸೇನೆಗೆ ಅನಧಿಕೃತವಾಗಿ ತ್ಯಾಜ್ಯ ಸಂಗ್ರಹಿಸಲು ಸ್ಥಳಾವಕಾಶ ನೀಡಿರುವುದು ಸರಿಯಲ್ಲವೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ನೆಮ್ಮದಿಯ ಸಾವಿಗೂ ಕೊಳ್ಳಿ:

ಜಿಲ್ಲೆಯ ಬಹುತೇಕ ಗ್ರಾ.ಪಂ.ಗಳಲ್ಲಿ ಹಿಂದೂ ರುದ್ರಭೂಮಿಗಳ ನಿರ್ವಹಣೆಯಲ್ಲಿ ಅನಾಸ್ತೆ ಕಂಡುಬರುತ್ತಿದೆ. ತಂತ್ರಜ್ಞಾನಗಳು ವಿಸ್ತರಿಸಿದ್ದರೂ, ಇವು ಯಾವುವೂ ಇಲ್ಲಿಯ ರುದ್ರಭೂಮಿ ನಿರ್ವಹಣೆಯಲ್ಲಿ ಕಂಡುಬರುತ್ತಿಲ್ಲ. ಸರಿಯಾದ ರಸ್ತೆ, ವಿದ್ಯುತ್, ನೀರಿನ ಸೌಕರ್ಯ, ಆಸನ ವ್ಯವಸ್ಥೆ ಮೊದಲಾದವುಗಳು ತಲುಪಿಲ್ಲ. ಅವೈಜ್ಞಾನಿಕ ವಿಧಾನಗಳಲ್ಲಿ ಶವ ದಹಿಸುವ ಕ್ರಮಗಳಿಂದ ಹೆಚ್ಚಿನ ರುದ್ರಭೂಮಿ ಬಳಕೆಗೆ ಸ್ಥಳೀಯರ ಪ್ರತಿರೋಧ ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ಜೊತೆಗೆ ಇತರ ಬಳಕೆಗೂ ಗ್ರಾ.ಪಂ.ಗಳು ರುದ್ರಭೂಮಿಯನ್ನು ಕಬಳಿಸುವ ಯತ್ನಗಳೂ ಕಂಡುಬರುತ್ತಿದೆ.

ಸೋಮವಾರ ಪುದುಕೋಳಿ ಹಿಂದೂರುದ್ರಭೂಮಿ ಪರಿಸರದಲ್ಲಿ ನಡೆದ ಪ್ರತಿಭಟನೆನಾ ಸ್ಥಳಕ್ಕೆ ಕಾಸರಗೋಡು ಬ್ಲಾ.ಪಂ.ಸದಸ್ಯೆ ಅಶ್ವಿನಿ ಮೊಳೆಯಾರ, ಗ್ರಾ.ಪಂ. ಸದಸ್ಯೆ ಸ್ವಪ್ನಾ ಜೆ.ಆಗಮಿಸಿ ಪ್ರತಿಭಟನೆಗೆ ನೇತೃತ್ವ ನೀಡಿದರು. ಬಳಿಕ ಆಗಮಿಸಿದ ಬದಿಯಡ್ಕ ಗ್ರಾ.ಪಂ.ಅಧ್ಯಕ್ಷೆ ಶಾಂತಾ ಬಾರಡ್ಕ, ಉಪಾಧ್ಯಕ್ಷ ಅಬ್ಬಾಸ್ ಎಂ., ಸಹ ಕಾರ್ಯದರ್ಶಿ ಸಜಿತ್ ಆಗಮಿಸಿ ಪ್ರತಿಭಟನ ನಿರತರೊಂದಿಗೆ ಮಾತುಕತೆ ನಡೆಸಿದರು. ಪ್ರಸ್ತುತ ನಿರ್ವಹಿಸಲಾಗುತ್ತಿರುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಿ, ರುದ್ರಭೂಮಿಯ ಭೂ  ದಾಖಲೆಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ಈ ಸಂದರ್ಭ ನೀಡಿದರು.

ಪ್ರತಿಭಟನೆಯಲ್ಲಿ ಸ್ಥಳೀಯರಾದ ಸದಾಶಿವ ಮಾಸ್ತರ್, ಮಧುಚಂದ್ರ ಮಾನ್ಯ, ಮಂಜುನಾಥ ಪುದುಕೋಳಿ, ಕಿರಣ್ ನೀರ್ಚಾಲು, ರವಿಚಂದ್ರ ಮಲ್ಲಡ್ಕ, ಸತೀಶ್ ಏಣಿಯರ್ಪು, ಅಜಿತ್ ನೀರ್ಚಾಲು, ಎಸ್.ಕೆ.ಗೋಪಾಲಕೃಷ್ಣ ಭಟ್ ನೀರ್ಚಾಲು, ನಾಗರಾಜ ಮಲ್ಲಡ್ಕ, ಸತ್ಯ ನೀರ್ಚಾಲು, ಮಣಿಮಕಂಠ ವಿ.ನಗರ, ಪುನೀತ್ ಏಣಿಯರ್ಪು, ಮೋಹನ ಏಣಿಯರ್ಪು, ಮಂಜುನಾಥ ಚುಕ್ಕಿನಡ್ಕ, ಬಾಲಕೃಷ್ಣ ಮಲ್ಲಡ್ಕ, ಹರಿಪ್ರಸಾದ್ ರತ್ನಗಿರಿ,ಅರವಿಂದ ಭಟ್ ನೀರ್ಚಾಲು, ವಿಷ್ಣು ಶರ್ಮ ಮಲ್ಲಡ್ಕ ಮೊದಲಾದವರು ನೇತೃತ್ವ ನೀಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries