ಕಾಸರಗೋಡು: ಮನೆ ಸನಿಹದ ಬಾವಿಯ ಮೇಲ್ಭಾಗದಿಂದ ಹಾದುಹೋಗಿದ್ದ ವಿದ್ಯುತ್ ಸರ್ವೀಸ್ ವಯರಿಗೆ ಸಿಲುಕಿಕೊಂಡಿದ್ದ ತೆಂಗಿನಗರಿ ತೆಗೆಯಲು ಬಾವಿ ಕಟ್ಟೆಯೇರಿದ್ದ ಸಂದರ್ಭ ಆಯತಪ್ಪಿ ಬಿದ್ದು, ಯುವಕ ದಾರುಣವಾಗಿ ಮೃತಪಟ್ಟಿದ್ದಾನೆ. ಉದುಮ ನಾಲಾಂವಾದುಕ್ಕಲ್ ವಲಿಯ ವಳಪ್ಪ್ ನಿವಾಸಿ, ಹೋಟೆಲ್ ಮಾಲಿಕ ಅರವಿಂದನ್-ಅಂಬುಜಾಕ್ಷಿ ದಂಪತಿ ಪುತ್ರ ಅಶ್ವಿನ್ ಅರವಿಂದ್ (18)ಮೃತಪಟ್ಟ ವಿದ್ಯಾರ್ಥಿ. ತೆಂಗಿನಗರಿ ತಂತಿಯಿಂದ ತೆರವುಗೊಳಿಸುವ ಮಧ್ಯೆ, ಬಾವಿಗೆ ಬಿದ್ದ ಯುವಕನನ್ನು ಊರವರು ಸೇರಿ ಮೇಲಕ್ಕೆತ್ತಲು ಪ್ರಯತ್ನಿಸಿದರೂ, ಸಾಧ್ಯವಾಗದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ನೆರವಿನಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿರಲಿಲ್ಲ. ಕೊಚ್ಚಿಯ ಹೋಟೆಲ್ ಒಂದರಲ್ಲಿ ಕೆಲಸ ನಡೆಸುತ್ತಿದ್ದ ಅಶ್ವಿನ್ ವಾರದ ಹಿಂದೆಯಷ್ಟೆ ಊರಿಗೆ ಆಗಮಿಸಿದ್ದನು.





