ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಭಾನುವರ ಮೃತ್ತಿಕಾ ವಿಸರ್ಜನೆ ನಡೆಸುವ ಮೂಲಕ ಮಂಗಲೋತ್ಸವ ನಡೆಯಿತು. ಈ ಮೂಲಕ ಕಳೆದ ಎರಡು ತಿಂಗಳ ಕಾಲ ನಡೆದುಬರುತ್ತಿರುವ ವ್ರತಾಚರಣೆ ಸಂಪನ್ನಗೊಂಡಿತು.
ಬೆಳಗ್ಗೆ ಪ್ರಾತ:ಕಾಲದ ಪೂಜೆ, ಸೀಮೋಲ್ಲಂಘನ, ಭಜನೆ, ಹಾಗೂ 60ದಿವಸಗಳಿಂದ ನಡೆದುಬರುತ್ತಿದ್ದ ಅಖಂಡ ಭಜನಾ ಸಂಕೀರ್ತನೆ ಸಮಾರೋಪ ನಡೆಯಿತು
ಈ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಚಾತುರ್ಮಾಸ್ಯ ಎಂಬುದು ಭಕ್ತಿ ಸಾಂದ್ರತೆಯ ಪುಣ್ಯ ಕಾಲ. ಭಗವಂತ ಯೋಗ ನಿದ್ರೆಯಲ್ಲಿರುವ ಕಾಲ ಇದಾಗಿದೆ. ಕಲಿಗಾಲದಲ್ಲಿ ಯಜ್ಞತುಲ್ಯವಾದ ಭಜನೆಯು ಭಗವಂತನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಲಿರುವ ಮಾರ್ಗವಾಗಿದೆ. ಈ ಪುಣ್ಯಕಾಲದಲ್ಲಿ ಭಾಗಿಯಾಗಲು ಸಾಧ್ಯವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅನುಗ್ರಹ ಭಾಷಣ ಮಾಡಿದರು. ಗೋಪಾಲಕೃಷ್ಣ ಭಟ್ ಎಡನೀರು ಐಎಎಸ್ ಆಶಯ ಭಾಷಣ ಮಾಡಿದರು. ಉದ್ಯಮಿ, ಸುರೇಶ್ ನಾಯಕ್ ಪೂನಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಅತಿಥಿಗಳನ್ನು ಹಾಗೂ ಶ್ರೀಮಠದಲ್ಲಿ ಸೇವಾಕರ್ತರನ್ನು ಶ್ರೀ ಸಚ್ಚಿದಾನಂದ ಸ್ವಾಮೀಜಿ ಹರಸಿದರು. ವೇಣುಗೋಪಾಲ ಮಾಸ್ಟರ್ ವಂದಿಸಿದರು.
ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭವನ್ನು ಶನಿವಾರ ಆಯೋಜಿಸಲಾಗಿತ್ತು.








