ಉಪ್ಪಳ: ಬೇಕೂರು ಶಾಲಾ ವಠಾರದೊಳಗೆ ಅಪ್ರಾಪ್ತರು ಕಾರನ್ನು ಅಪಾಯಕರ ರೀತಿಯಲ್ಲಿ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾರಿನ ಆರ್‍ಸಿ ಮಾಲಕಿ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾರು ಶಾಲಾ ಆವರಣದೊಳಗೆ ಆಗಮಿಸಿ ಅತಿಯಾದ ವೇಗದಿಂದ ಅಪಾಯಕರ ರೀತಿಯಲ್ಲಿ ಚಲಾಯಿಸುತ್ತಿರುವುದನ್ನು ಕಂಡ ಶಾಲಾ ಶಿಕ್ಷಕಿಯೊಬ್ಬರು ತಕ್ಷಣ ಶಾಲಾ ಗೇಟನ್ನು ಮುಚ್ಚಿ ಬೀಗ ಜಡಿದಿದ್ದಾರೆ. ಇದರಿಂದ ಅಪ್ರಾಪ್ತರಿಗೆ ಹೊರತೆರಳಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಶಾಲೆಯಲ್ಲಿ ನಡೆಯುತ್ತಿದ್ದ ಓಣಂ ಆಚರಣೆ ಮಧ್ಯೆ ಕಾರಿನ ಅಪಾಯಕಾರಿ ಓಡಾಟ ನಡೆದಿದೆ. ಅಪಾಯಕಾರಿಯಾಗಿ ವಾಹನ ಚಲಾಯಿಸಿದ ಕಾರಿನಲ್ಲಿ ಅಪ್ರಾಪ್ತರಾದ ಮೂರುಮಂದಿಯಿದ್ದು, ಇವರ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇವರನ್ನು ಕಚೇರಿಯೊಳಗೆ ಕರೆತಂದು ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇವರು ಡ್ರೈವಿಂಗ್ ಲೈಸನ್ಸ್ ಹೊಂದಿರದ ಹಿನ್ನೆಲೆಯಲ್ಲಿ ಆರ್‍ಸಿ ಮಾಲಕಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




