ಕಾಸರಗೋಡು: ಮಳೆಗಾಲದಲ್ಲಿ ಚೆಂಬರಿಕ ಕಡಪ್ಪುರ ಪ್ರದೇಶದಲ್ಲಿ ತೀವ್ರ ಸಮುದ್ರ ಕೊರೆತದಿಂದ ಅನಾಹುತ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೆ. 1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಸ್ಥಳೀಯ ನಿವಾಸಿ ದಾವೂದ್ ಸಿ.ಕೆ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಸಮುದ್ರ ಕೊರೆತದಿಂದ ಸ್ಥಳೀಯ ನಿವಾಸಿಗಳು ಹಲವು ಮನೆ, ಜಮೀನು ಮತ್ತು ತೆಂಗಿನ ಮರಗಳನ್ನು ಕಳೆದುಕೊಂಡಿದ್ದಾರೆ. ಇಲ್ಲಿ ವಆಸಿಸುತ್ತಿರುವ ಬಹುತೇಕ ಮಂದಿ ಕೂಲಿ ಕೆಲಸ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇರುವ ಸೂರು ಕಳೆದುಕೊಂಡಲ್ಲಿ ವಾಸ್ತವ್ಯಕ್ಕೆ ಸ್ಥಳಾವಕಾಶವಿಲ್ಲದ ಪರಿಸ್ಥಿತಿ ಎದುರಿಸುತ್ತಿದ್ದು, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದ ಸುಮಾರು 60ತೆಂಗಿನ ಮರಗಳು ಹಾಗೂ ಮೂರು ಮನೆಗಳು ಸಮುದ್ರ ಪಾಲಾಗಿದ್ದು, ಇನ್ನೂ ಕೆಲವೊಂದು ಮನೆಗಳು ಅಪಾಯದಂಚಿನಲ್ಲಿದೆ. ಸಮುದ್ರ ಕೊರೆತ ಅನುಭವಿಸುತ್ತಿರುವ ಪ್ರದೇಶದಲ್ಲಿ ಕಗ್ಗಲ್ಲಿನ ತಡೆಗೋಡೆಯನ್ನು ನಿರ್ಮಿಸಿ, ಇಲ್ಲಿನ ಜನರ ಜೀವ, ಮನೆ ಹಾಗೂ ಆಸ್ತಿಗೆ ಸಂರಕ್ಷಣೆ ಒದಗಿಸುವಂತೆ ಚೆಮ್ಮನಾಡ್ ಪಂಚಾಯತ್‍ನ 20ನೇ ವಾರ್ಡ್‍ನ ಚೆಂಬಿರಿಕ ನಾಗರಿಕ ಸಮಿತಿ ಒತ್ತಾಯಿಸಿದ್ದಾರೆ.
ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆ. 1ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು, ಚೆಂಬರಿಕ ನಿವಾಸಿಗಳನ್ನು ಒಳಗೊಂಡ ಪ್ರದೇಶದ ಜನರನ್ನು ಒಟ್ಟುಸೇರಿಸಿ ಪ್ರತಿಭಟನೆ ಆಯೋಜಿಸಲಾಗುತ್ತಿದೆ. ಉದುಮ ಶಾಸಕ ಸಿ.ಎಚ್. ಕುಞಂಬು ಧರಣಿ ಉದ್ಘಾಟಿಸಿದರು. ಚೆಮ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಾನವಾಸ್ ಪಾದೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಲೀಲಾಕೃಷ್ಣನ್ ಮೊದಲಾದ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ತಾಜುದ್ದೀನ್ ಚೆಂಬರಿಕಾ, ಹಂಸಾ ಸಿಎ, ಷರೀಫ್ ಸಿಎಂ, ಸಿಎಚ್. ಮುಹಮ್ಮದ್, ಅಬ್ದುರಹಿಮಾನ್ ತುರುತಿ ಉಪಸ್ಥಿತರಿದ್ದರು.




