ಕಾಸರಗೋಡು: ಕೇರಳ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿದ್ದು, ಸಂರಕ್ಷಿತ ಸ್ಮಾರಕವಾದ ಕಾಸರಗೋಡು ಚಂದ್ರಗಿರಿ ಕೋಟೆಯ ನಿರ್ವಹಣಾ ಹಕ್ಕುಗಳನ್ನು ಕೇರಳ ಪ್ರಾಚ್ಯವಸ್ತು ಇಲಾಖೆಯು ಮೂರು ವರ್ಷಗಳ ಅವಧಿಗೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಡಿಟಿಪಿಸಿ)ಕ್ಕೆ ಹಸ್ತಾಂತರಿಸಲಿದೆ. ಈ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕುವ ಬಗ್ಗೆ ಪ್ರಾಚ್ಯವಸ್ತು ಇಲಾಖೆ ನಿರ್ದೇಶಕರಿಗೆ ವಾಬ್ದಾರಿ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ಚಂದ್ರಗಿರಿ ಕೋಟೆ ಪ್ರವಾಸಿಗರ ಆಕರ್ಷಣೆಯಿಲ್ಲದೆ ಸೊರಗುತ್ತಿದ್ದು, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ಕೋಟೆಯನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಲಾಗುತ್ತಿದೆ. ಚಂದ್ರಗಿರಿ ಕೋಟೆಯ ಸಂಪೂರ್ಣ ಹಕ್ಕುಸ್ವಾಮ್ಯ ರಾಜ್ಯ ಸರ್ಕಾರದ್ದಾಗಿದೆ. ಕೋಟೆಯ ನಿರ್ವಹಣಾ ಹಕ್ಕುಗಳನ್ನು ಪ್ರಾಚ್ಯವಸ್ತು ಇಲಾಖೆಗೆ ವರ್ಗಾಯಿಸುವಂತೆ ಪ್ರಾಚ್ಯವಸ್ತು ಇಲಾಖೆ ನಿರ್ದೇಶಕರಿಗೆ ಸರ್ಕಾರ ಈಗಾಗಲೇ ನಿರ್ದೇಶನ ನೀಡಿದೆ. ಪ್ರಸಕ್ತ ಇರುವ ನಿಯಮಗಳು ಮತ್ತು ನಿಬಂಧನೆಗಳು ಯಥಾ ಪ್ರಕಾರ ಮುಂದುವರಿಯಲಿದೆ. ಡಿಟಿಪಿಸಿ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ಜವಾಬ್ದಾರಿಯನ್ನು ರಾಜ್ಯ ಪುರಾತತ್ವ ನಿರ್ದೇಶಕರಿಗೆ ವಹಿಸಲಾಗಿದೆ.





