ಬದಿಯಡ್ಕ: ಬಲಿವಾಡು ಅಂದರೆ ಅರ್ಪಣೆ. ಸಾಮೂಹಿಕ ಬಲಿವಾಡು ಕೂಟಗಳಿಂದ ಭಕ್ತಾದಿಗಳ ಕೂಡುವಿಕೆ ಆಗುತ್ತದೆ. ಇದರಿಂದ ಸಮರ್ಪಣಾ ಮನೋಭಾವ ಬೆಳೆಯುತ್ತದೆ. ವಿಶೇಷ ಸಂಕಲ್ಪಗಳೊಂದಿಗೆ ದೇವರಿಗೆ ವಿವಿಧ ಪಾರಾಯಣಗಳ ಬಲಿವಾಡು ನಡೆಸಿದ್ದು ಸೂಕ್ತವಾಗಿದೆ. ಇದರಿಂದ ಹಿಂದೂ ಧರ್ಮದಲ್ಲಿನ ಶ್ರದ್ಧೆ ಆಚರಣೆಗಳು ಬಾಳಿ ಬೆಳಗುತ್ತದೆ. ಮುಂದಿನ ತಲೆಮಾರಿಗೆ ಕೂಡುವಿಕೆ- ಕೇಳುವಿಕೆಯ ಮಹತ್ವವನ್ನು ಆಚರಣೆಗಳು ಮೂಲಕ ನಾವು ಸಾದೃಶ್ಯಗೊಳಿಸಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ವಿಶ್ವಹಿಂದೂ ಪರಿಷತ್ತಿನ ಹಿರಿಯ ಕಾರ್ಯಕರ್ತ ಉಳುವಾನ ಶಂಕರ ಭಟ್ ಬಾಯಾರು ಅಭಿಪ್ರಾಯ ವ್ಯಕ್ತಪಡಿಸಿದರು.
ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಸೋಣೆ ಶನಿವಾರ ಸಾಮೂಹಿಕ ಬಲಿವಾಡು ಕೂಟ ಸಂದರ್ಭದ 'ವಿಷ್ಣು ಸಹಸ್ರನಾಮ, ಭಗವದ್ಗೀತೆ, ನಾರಾಯಣೀಯಂ ಪಾರಾಯಣ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಪ್ರಕಾಶ ವೈ.ಎಚ್. ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರ ವೈ.ವಿ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕಿ ಹಾಗೂ ಆದರ್ಶ ಗೀತಾ ಪಾರಾಯಣದ ಸಂಚಾಲಕಿ ಕಮಲಾ ಎಸ್. ಭಟ್ ಅವರು ವಿವಿಧ ಪಾರಾಯಣಗಳ ಅಧ್ಯಯನದ ಕುರಿತು ಮಾಹಿತಿ ನೀಡಿದರು.
ಇನ್ನೋರ್ವ ಆಡಳಿತ ಮೊಕ್ತೇಸರ ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಾಯಾರಿನ ಹಿರಣ್ಯ ವಸಂತಿ ಭಟ್, ಶಶಿಕಲಾ ಭಟ್ ಹಿರಣ್ಯ., ನಿವೃತ್ತ ಶಿಕ್ಷಕಿ ವಸಂತ ಕುಮಾರಿ ಹಾಗೂ ಏತಡ್ಕದ ಸುತ್ತ ಮುತ್ತಲಿನ ಭಕ್ತರು ವಿಷ್ಣು ಸಹಸ್ರನಾಮ, ಭಗವದ್ಗೀತೆ, ನಾರಾಯಣೀಯಂ ಪಾರಾಯಣ ಮಾಡಿದರು.




.jpg)
