ನವದೆಹಲಿ: ದೇಶದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಇದರ ಸಿದ್ಧತೆ ನಡೆಸುವ ಸಂಬಂಧ ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಆಯೋಗದ ಹಿರಿಯ ಅಧಿಕಾರಿಗಳು ಮಹತ್ವದ ಸಭೆಗಳನ್ನು ನಡೆಸುತ್ತಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ದೇಶದಾದ್ಯಂತ ಎಸ್‌ಐಆರ್ ನಡೆಸಲು ಸಿದ್ಧತೆಗಳ ಕುರಿತು ಚರ್ಚೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರುವರಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಮೂರನೇ ಮಹತ್ವದ ಸಭೆಯಾಗಿದೆ.
ಎಸ್‌ಐಆರ್ ನೀತಿಯ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡುವ ಸಾಧ್ಯತೆ ಇದೆ. ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಎಸ್‌ಐಆರ್ ಅನುಷ್ಠಾನದಲ್ಲಾದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
2026ರಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದ್ದು, ಅದಕ್ಕೂ ಮುನ್ನವೇ, ಈ ವರ್ಷಾಂತ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
ಬಾಂಗ್ಲಾ ಮತ್ತು ಮ್ಯಾನ್ಮಾರ್ ಅಕ್ರಮ ವಲಸಿಗರನ್ನು ಹಲವು ರಾಜ್ಯಗಳಲ್ಲಿ ಪತ್ತೆ ಮಾಡಿದ ನಂತರ ವಿದೇಶಿ ಅಕ್ರಮ ವಲಸಿಗರನ್ನು ಪಟ್ಟಿಯಿಂದ ತೆಗೆಯುವುದು ಈ ವಿಶೇಷ ಪರಿಷ್ಕರಣೆಯ ಪ್ರಾಥಮಿಕ ಉದ್ದೇಶ ಎನ್ನಲಾಗುತ್ತಿದೆ. ಚುನಾವಣಾ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ದೋಷಮುಕ್ತ ಮತದಾರರ ಪಟ್ಟಿ ರಚನೆಯ ಕ್ರಮ ವಹಿಸಲಿದ್ದಾರೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿಗೆ ಲಾಭ ಮಾಡುವ ಉದ್ದೇಶದಿಂದಲೇ ಮತದಾರರ ಮಾಹಿತಿ ತಿರುಚುವ ಕೆಲಸ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ನಡುವೆಯೂ ಆಯೋಗವು ದೇಶದಾದ್ಯಂತ ಎಸ್‌ಐಆರ್ ಅನುಷ್ಠಾನಕ್ಕೆ ಹೊರಟಿದೆ.
ಹೊರರಾಜ್ಯಗಳಲ್ಲಿ ನೆಲಸಿರುವವರಿಗೆ 'ಘೋಷಣಾ ಅರ್ಜಿ'
ಹೊರರಾಜ್ಯಗಳಲ್ಲಿ ನೆಲಸಿರುವವರಿಗಾಗಿಯೇ ಹೆಚ್ಚುವರಿಯಾಗಿ 'ಘೋಷಣಾ ಅರ್ಜಿ'ಯೊಂದನ್ನು ಪರಿಚಯಿಸಲು ಆಯೋಗ ಮುಂದಾಗಿದೆ. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ಮಧ್ಯೆ ಭಾರತದಲ್ಲಿ ಜನಿಸಿರುವ ಬಗ್ಗೆ ಅವರೆಲ್ಲ ದೃಢಪಡಿಸಬೇಕು. ಜನ್ಮ ದಿನಾಂಕ ಮತ್ತು ವಾಸಸ್ಥಳದ ದೃಢೀಕರಣ ಪತ್ರಗಳನ್ನು ಸಲ್ಲಿಸಬೇಕು. ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಈಗಾಗಲೇ ಬಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆಯೋಗಕ್ಕೆ ಸೂಚನೆ ನೀಡಿದೆ. ಕೆಲವು ರಾಜ್ಯಗಳು 2002 ಮತ್ತು 2004ರ ಮಧ್ಯೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಿದ್ದವು.




