ಮಾಸ್ಕೋ: ರಷ್ಯಾ-ಉಕ್ರೇನ್ ಯುದ್ಧದಿಂದ ಭಾರತ ಮತ್ತು ಚೀನಾ ದೇಶಗಳು ಕಡಿಮೆ ಬೆಲೆಗೆ ರಷ್ಯನ್ ತೈಲವನ್ನು ಖರೀದಿಸಿ ಲಾಭ ಮಾಡಿಕೊಳ್ಳುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ರಷ್ಯಾದಿಂದ ರಫ್ತಾದ ತೈಲದಲ್ಲಿ ಶೇ. 47 ಚೀನಾಗೆ, ಶೇ. 38 ಭಾರತಕ್ಕೆ ಹೋಗಿದ್ದು, ಭಾರತವು ತೈಲ ಆಮದಿನಲ್ಲಿ 17 ಬಿಲಿಯನ್ ಡಾಲರ್ ಹಣ ಉಳಿಸಿರಬಹುದು ಎಂದು ಅಂದಾಜಿಸಲಾಗಿದೆ.
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ನಂತರ ಅಮೆರಿಕವು ಆರ್ಥಿಕ ದಿಗ್ಬಂಧನ ಹೇರಿದ ಪರಿಣಾಮ, ರಷ್ಯಾ ತನ್ನ ತೈಲವನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಇಳಿಸಿತು. ಇದರಿಂದ ಭಾರತಕ್ಕೆ ತಾತ್ಕಾಲಿಕ ಲಾಭವಾದರೂ, ಇದಕ್ಕಿಂತ ಹೆಚ್ಚು ಲಾಭವನ್ನು ಅಮೆರಿಕದ ಡಿಫೆನ್ಸ್ ಕಂಪನಿಗಳು ಗಳಿಸುತ್ತಿವೆ ಎಂದು ಯೂರೇಷಿಯನ್ ಟೈಮ್ಸ್ ವರದಿ ತಿಳಿಸಿದೆ.
ಅಮೆರಿಕದ ವಿದೇಶೀ ಮಿಲಿಟರಿ ಮಾರಾಟ (FMS) ವ್ಯವಸ್ಥೆ ಅಡಿ 2022ರಲ್ಲಿ 50.9 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಲಾಗಿದ್ದರೆ, 2024ರಲ್ಲಿ ಇದು 117.9 ಬಿಲಿಯನ್ ಡಾಲರ್‌ಗಳಿಗೆ ಏರಿದೆ. ಇದೇ ಅವಧಿಯಲ್ಲಿ ನೇರ ಕಮರ್ಷಿಯಲ್ ಮಾರಾಟ 157.5 ಬಿಲಿಯನ್ ಡಾಲರ್‌ನಿಂದ 200.8 ಬಿಲಿಯನ್ ಡಾಲರ್‌ಗೆ ಏರಿಕೆ ಕಂಡು ಶೇ. 27.6ರಷ್ಟು ಹೆಚ್ಚಳವಾಗಿದೆ.
ಈ ಅವಧಿಯಲ್ಲಿ ಅಮೆರಿಕದಿಂದ ರಫ್ತಾದ ಹೆಚ್ಚಿನ ಶಸ್ತ್ರಾಸ್ತ್ರಗಳು ಉಕ್ರೇನ್ ಹಾಗೂ ಯೂರೋಪಿಯನ್ ಯೂನಿಯನ್‌ಗೆ ತೆರಳಿವೆ. ಇದರಿಂದ ಅಮೆರಿಕದ ಡಿಫೆನ್ಸ್ ಕಂಪನಿಗಳಿಗೆ ಭಾರೀ ಆದಾಯ ಲಭಿಸಿದೆ.




