HEALTH TIPS

ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ಪರ ಮತಚಲಾಯಿಸಿದ ಭಾರತ

ನವದೆಹಲಿ: ಭಾರತವು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಫೆಲೆಸ್ತೀನ್ ದೇಶ ಮತ್ತು ಎರಡು-ರಾಜ್ಯ ಪರಿಹಾರಕ್ಕೆ ಬೆಂಬಲ ಸೂಚಿಸುವ 'ನ್ಯೂಯಾರ್ಕ್ ಘೋಷಣೆ'ಯ ಪರವಾಗಿ ಮತ ಚಲಾಯಿಸಿದೆ.

ಫ್ರಾನ್ಸ್ ಮಂಡಿಸಿದ ಈ ನಿರ್ಣಯಕ್ಕೆ 142 ರಾಷ್ಟ್ರಗಳು ಪರವಾಗಿ, 10 ರಾಷ್ಟ್ರಗಳು ವಿರುದ್ಧವಾಗಿ ಮತ ಚಲಾಯಿಸಿದವು.

ಈ ವೇಳೆ 12 ರಾಷ್ಟ್ರಗಳು ಗೈರು ಹಾಜರಾದವು. ಆ ಮೂಲಕ ನಿರ್ಣಯಕ್ಕೆ ಅಂಗೀಕಾರ ದೊರಕಿತು.

ಇದರಿಂದ ಭಾರತವು ಗಾಝಾ ವಿಚಾರದಲ್ಲಿ ತನ್ನ ಇತ್ತೀಚಿನ ನಿಲುವನ್ನು ಬದಲಿಸಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತವು ಯುದ್ಧ ವಿರಾಮಕ್ಕೆ ಕರೆ ನೀಡಿದ ವಿಶ್ವಸಂಸ್ಥೆಯ ನಾಲ್ಕು ನಿರ್ಣಯಗಳಿಂದ ದೂರವಿದ್ದು ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಭಾರತದ ನಿಲುವು ಅಂತರರಾಷ್ಟ್ರೀಯ ಸಮನ್ವಯಕ್ಕೆ ಹೊಂದಾಣಿಕೆಯಾಗಿದೆ.

ಏಳು ಪುಟಗಳ ನ್ಯೂಯಾರ್ಕ್ ಘೋಷಣೆಯಲ್ಲಿ, ಗಾಝಾದ ಯುದ್ಧ ಕೊನೆಗೊಳಿಸಿ, ಇಸ್ರೇಲ್ ಮತ್ತು ಫೆಲೆಸ್ತೀನ್ ಸಂಘರ್ಷಕ್ಕೆ ಶಾಶ್ವತ ಹಾಗೂ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ನಿರ್ಣಯವು ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿದೆ.ಇಸ್ರೇಲ್ ನಡೆಸಿದ ಪ್ರತೀಕಾರಾತ್ಮಕ ದಾಳಿಗಳಿಂದ ಗಾಝಾದಲ್ಲಿ ಉಂಟಾದ ನಾಗರಿಕರ ಸಾವು, ಮೂಲಸೌಕರ್ಯ ಹಾನಿ ಮತ್ತು ಮಾನವೀಯ ಬಿಕ್ಕಟ್ಟನ್ನು ಟೀಕಿಸಿದೆ.

ವಸಾಹತು, ಭೂ ಕಬಳಿಕೆ ಮತ್ತು ಹಿಂಸಾಚಾರವನ್ನು ಇಸ್ರೇಲ್ ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದೆ.

ಗಾಝಾವು ಫೆಲೆಸ್ತೀನನ ಅವಿಭಾಜ್ಯ ಅಂಗವಾಗಿದ್ದು, ಪಶ್ಚಿಮ ದಂಡೆಯೊಂದಿಗೆ ಏಕೀಕರಿಸಬೇಕೆಂದು ಘೋಷಣೆಯಲ್ಲಿ ತಿಳಿಸಲಾಗಿದೆ.

ವಿಶ್ವಸಂಸ್ಥೆಯು ಅಂಗೀಕರಿಸಿರುವ ಈ ನಿರ್ಣಯವನ್ನು ಇಸ್ರೇಲ್ ತಿರಸ್ಕರಿಸಿದೆ. "ಇದು ಹಮಾಸ್ ಬಗ್ಗೆ ಉಲ್ಲೇಖವಿಲ್ಲದ ರಾಜಕೀಯ ಸರ್ಕಸ್" ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ವಕ್ತಾರ ಓರೆನ್ ಮಾರ್ಮೊರ್‌ಸ್ಟೈನ್ ಹೇಳಿದ್ದಾರೆ.

ಅಮೆರಿಕ ಕೂಡ ನಿರ್ಣಯದ ವಿರುದ್ಧವಾಗಿ ನಿಂತು, ಇದನ್ನು "ಹಮಾಸ್‌ಗೆ ನೀಡಿದ ಉಡುಗೊರೆ" ಎಂದು ಕರೆದಿದೆ.

ಅಕ್ಟೋಬರ್ 7, 2023ರ ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 1,200ಕ್ಕೂ ಹೆಚ್ಚಿನ ನಾಗರಿಕರು ಸಾವನ್ನಪ್ಪಿದ್ದರು. 250 ಕ್ಕೂ ಹೆಚ್ಚು ಮಂದಿಯನ್ನು ಹಮಾಸ್ ಒತ್ತೆಯಾಳಾಗಿರಿಸಿಕೊಂಡಿತ್ತು. ನಂತರ ಇಸ್ರೇಲ್ ಫೆಲೆಸ್ತೀನ್ ಮೇಲೆ ನಡೆಸಿದ ದಾಳಿಗಳಲ್ಲಿ ಗಾಝಾದಲ್ಲಿ 64,000 ಕ್ಕೂ ಹೆಚ್ಚು ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಈ ಹೊಸ ನಿಲುವು, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ನಡೆಯುತ್ತಿರುವ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಮಹತ್ವದ ಬೆಂಬಲವೆಂದು ಪರಿಗಣಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries