HEALTH TIPS

"ಬಾಬ್ರಿ ಮಸೀದಿ ನಿರ್ಮಾಣವೇ ಅಪವಿತ್ರ ಕೃತ್ಯ"!; ತಾವೇ ನೀಡಿದ್ದ ತೀರ್ಪಿಗೆ ನಿವೃತ್ತ CJI ಚಂದ್ರಚೂಡ್ ವ್ಯತಿರಿಕ್ತ ಹೇಳಿಕೆ!

ನವದೆಹಲಿ: ಅಯೋಧ್ಯೆ ರಾಮ ಮಂದಿರ ವಿಷಯವಾಗಿ 2019 ರಲ್ಲಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್ ನ ಪೀಠದ ಭಾಗವಾಗಿದ್ದ ನಿವೃತ್ತ ಸಿಜೆಐ ಚಂದ್ರಚೂಡ್, ತಾವೇ ಬರೆದಿದ್ದ ತೀರ್ಪಿಗೆ ವಿರೋಧಾಭಾಸ ಹೇಳಿಕೆ ನೀಡುವ ಮೂಲಕ ಈಗ ಸುದ್ದಿಯಲ್ಲಿದ್ದಾರೆ. 

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ನ್ಯೂಸ್ ಲಾಂಡ್ರಿಗೆ ನೀಡಿದ ಸಂದರ್ಶನದಲ್ಲಿ "ಬಾಬರಿ ಮಸೀದಿ ನಿರ್ಮಾಣವೇ (16 ನೇ ಶತಮಾನದಲ್ಲಿ) ಮೂಲಭೂತವಾಗಿ ಅಪವಿತ್ರಗೊಳಿಸುವ ಕೃತ್ಯ" ಎಂದು ಹೇಳುವ ಮೂಲಕ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ನ್ಯಾಯಮೂರ್ತಿ (ನಿವೃತ್ತ) ಚಂದ್ರಚೂಡ್ ಅವರು 2019 ರ ನವೆಂಬರ್‌ನಲ್ಲಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಸಿರು ನಿಶಾನೆ ತೋರಿದ ಆಗಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಪೀಠದ ಸದಸ್ಯರಾಗಿದ್ದರು.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತನ್ನ ವರದಿಯಲ್ಲಿ ಮಸೀದಿಯ ಕೆಳಗೆ ಒಂದು ರಚನೆ ಇತ್ತು ಎಂದು ಹೇಳಿದ್ದರೂ, ಬಾಬರಿ ಮಸೀದಿ ನಿರ್ಮಿಸಲು ಆ ರಚನೆಯನ್ನು ಕೆಡವಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಆಧಾರವಾಗಿರುವ ರಚನೆ ಮತ್ತು ಮಸೀದಿಯ ನಡುವೆ ಹಲವಾರು ಶತಮಾನಗಳ ಅಂತರವಿತ್ತು ಎಂದು ನ್ಯಾಯಪೀಠ ಒತ್ತಿ ಹೇಳಿತ್ತು.

ಆದಾಗ್ಯೂ, ಈ ಸೆಪ್ಟೆಂಬರ್ 24 ರಂದು ಪ್ರಕಟವಾದ ನ್ಯೂಸ್‌ಲಾಂಡ್ರಿಯ ಶ್ರೀನಿವಾಸನ್ ಜೈನ್‌ಗೆ ನೀಡಿದ ಸಂದರ್ಶನದಲ್ಲಿ, "ಪುರಾತತ್ತ್ವ ಶಾಸ್ತ್ರದ ಉತ್ಖನನದಿಂದ ಸಾಕಷ್ಟು ಪುರಾವೆಗಳು ದೊರೆತಿವೆ. ಈಗ, ಪುರಾತತ್ತ್ವ ಶಾಸ್ತ್ರದ ಉತ್ಖನನದ ಸಾಕ್ಷ್ಯಾಧಾರ ಮೌಲ್ಯ ಏನು ಎಂಬುದು ಒಟ್ಟಾರೆಯಾಗಿ ಪ್ರತ್ಯೇಕ ವಿಷಯವಾಗಿದೆ. ನಾನು ನಿಜವಾಗಿಯೂ ಹೇಳಲು ಬಯಸುವುದು ಇಷ್ಟೇ, ಪುರಾತತ್ತ್ವ ಶಾಸ್ತ್ರದ ವರದಿಯ ರೂಪದಲ್ಲಿ ಪುರಾವೆಗಳಿವೆ." ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ.

ಚಂದ್ರಚೂಡ್ ನ್ಯೂಸ್‌ಲಾಂಡ್ರಿಗೆ ಹೇಳಿದ್ದಕ್ಕೆ ವಿರುದ್ಧವಾಗಿ, ಎಎಸ್‌ಐ ವರದಿಯನ್ನು ಕಾನೂನನ್ನು ಆಧರಿಸಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟವಾಗಿ ಹೇಳಿದೆ.

ಹಿಂದಿದ್ದ ದೇವಾಲಯದ ಸಂರಚನೆಯ ಕಟ್ಟಡ ಕೆಡವಿಯೇ ಆ ಸ್ಥಳದಲ್ಲಿ ಬಾಬ್ರಿ ಮಸೀದಿ ನಿರ್ಮಿಸಲಾಯಿತು ಎಂದು ಸೂಚಿಸಲು ಯಾವುದೇ ಪುರಾತತ್ವ ಪುರಾವೆಗಳಿಲ್ಲ ಎಂದು ಕೋರ್ಟ್ ಹೇಳಿದ್ದರೂ, ಇತ್ತೀಚಿನ ಸಂದರ್ಶನದಲ್ಲಿ ನ್ಯಾ.ಚಂದ್ರಚೂಡ್, ಬಾಬ್ರಿ ಮಸೀದಿ ನಿರ್ಮಾಣವೇ ಮೂಲಭೂತವಾಗಿ ಅಪವಿತ್ರಗೊಳಿಸುವ ಕ್ರಿಯೆಯಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿಷಯವನ್ನು ಕೋರ್ಟ್ ನಂಬಿಕೆಯ ಆಧಾರದ ಮೇಲೆ ಇತ್ಯರ್ಥಪಡಿಸಿಲ್ಲ, ಬದಲಾಗಿ ಕಾನೂನು ತತ್ವಗಳು ಮತ್ತು ಸಾಕ್ಷ್ಯಾಧಾರಗಳನ್ನು ಆಧರಿಸಿ ಇತ್ಯರ್ಥಪಡಿಸಿದೆ ಎಂದು ಚಂದ್ರಚೂಡ್ ಹೇಳಿದ್ದಾರೆ.

ಈ ಸಂದರ್ಶನದ ನಂತರ ಬಂದಿರುವ ಹೇಳಿಕೆಗಳ ಬಗ್ಗೆಯೂ ಸ್ಪಷ್ಟನೆ ನೀಡಿರುವ ನ್ಯಾ. ಚಂದ್ರಚೂಡ್, ನ್ಯೂಸ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ನಾನು ವ್ಯಕ್ತಪಡಿಸಿದ ಅಭಿಪ್ರಾಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರು ತಮ್ಮ ಮೂಗಿನ ನೇರಕ್ಕೆ ಅಂಶಗಳನ್ನು ಪರಿಗಣಿಸಿ ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಕೇಸ್ ನ ತೀರ್ಪು 1,045 ಪುಟದಷ್ಟು ಸುದೀರ್ಘವಾಗಿದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವವರು ತೀರ್ಪನ್ನು ಪೂರ್ತಿಯಾಗಿ ಓದಿಲ್ಲ, ದಾಖಲೆ ನೋಡದೇ ಸಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಪೋಸ್ಟ್ ಮಾಡುವುದು ಸುಲಭ ಎಂದು ನ್ಯಾ.ಚಂದ್ರಚೂಡ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries