ನವದೆಹಲಿ: ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಿದ ಕ್ರಮ ವಿರೋಧಿಸಿ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯಿಂದ ನೇಪಾಳ ನಲುಗಿರುವ ವಿಷಯ ಕುರಿತು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು ಪ್ರತಿಕ್ರಿಯಿಸಿ, 'ಜೆನ್ ಝೀ ಪ್ರತಿಭಟನೆ ಎಂದು ಕರೆಯಲಾಗುವ ಈ ಹೋರಾಟದ ಹಿಂದಿರುವವರು ಯಾರು?' ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. 'ನೆಪೊ ಕಿಡ್ಸ್' ಎಂಬ ಟ್ರೆಂಡ್ ಹೇಗೆ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟಕ್ಕೆ ಕಾರಣವಾಯಿತು? ಬಾಂಗ್ಲಾದೇಶದಲ್ಲಿ ಅಂದು ಏನು ನಡೆದಿತ್ತೋ, ಇಂದು ಅದು ನೇಪಾಳದಲ್ಲಿ ನಡೆಯುತ್ತಿದೆ. ಈ ಹೋರಾಟ ಇದ್ದಕ್ಕಿದ್ದಂತೆ ಆರಂಭವಾಗಿದ್ದೇ ಅಥವಾ ಇನ್ಯಾರದ್ದೋ ಪ್ರಾಯೋಜಿತವೇ? ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಅಸಮಾನತೆಯಿಂದ ಘನತೆಯ ಬದುಕು ಸಾಧ್ಯವಾಗದಿರುವುದೇ ಜೆನ್ ಝೀಗಳ ಪ್ರತಿಭಟನೆಗೆ ಕಾರಣವೇ? ಎಂದು ಪ್ರಶ್ನಿಸಿದ್ದಾರೆ.
'ಅತ್ಯಾಧುನಿಕ ಸಾಮಾಜಿಕ ಮಾಧ್ಯಮಗಳ ಪ್ರಚಾರ ಮಾರ್ಗ ಮತ್ತೊಮ್ಮೆ ಸರ್ಕಾರದ ಪತನಕ್ಕೆ ಕಾರಣವಾಗಿದೆ. ಇದು ನಿಜಕ್ಕೂ ಕಳವಳಕಾರಿ. ಇದರ ಮುಂದಿನ ಗುರಿ ಯಾವುದು?' ಎಂದು ತಿವಾರಿ ಪ್ರಶ್ನಿಸಿದ್ದಾರೆ.
ನೇಪಾಳದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಛಾಯೆ ಉತ್ತರ ಪ್ರದೇಶದ ಗಡಿ ಜಿಲ್ಲೆಗೆ ಆವರಿಸಿದೆ. ಮಾರುಕಟ್ಟೆಗಳು ಖಾಲಿಯಾಗಿವೆ. ಪ್ರಯಾಣಗಳನ್ನು ಹಲವರು ರದ್ದುಗೊಳಿಸಿದ್ದಾರೆ. ಗಡಿಯಲ್ಲಿ ಸಂಬಂಧ ಹೊಂದಿರುವ ಕುಟುಂಬಗಳು ಸಂಪರ್ಕವೇ ಇಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ.
Was #nepokids spontaneous or sponsored that struck a deep chord with #GenZ battling unemployment & income inequality to lead a life of dignity.
A sophisticated social media campaign has again felled a government in South Asia .
Bangladesh now Nepal who is next ?…
— Manish Tewari (@ManishTewari) September 10, 2025
ನೇಪಾಳದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಛಾಯೆ ಉತ್ತರ ಪ್ರದೇಶದ ಗಡಿ ಜಿಲ್ಲೆಗೆ ಆವರಿಸಿದೆ. ಮಾರುಕಟ್ಟೆಗಳು ಖಾಲಿಯಾಗಿವೆ. ಪ್ರಯಾಣಗಳನ್ನು ಹಲವರು ರದ್ದುಗೊಳಿಸಿದ್ದಾರೆ. ಗಡಿಯಲ್ಲಿ ಸಂಬಂಧ ಹೊಂದಿರುವ ಕುಟುಂಬಗಳು ಸಂಪರ್ಕವೇ ಇಲ್ಲದೆ ಸಮಸ್ಯೆಗೆ ಸಿಲುಕಿದ್ದಾರೆ.
'ನೇಪಾಳದ ಗ್ರಾಹಕರು ನಿತ್ಯ ಇಲ್ಲಿನ ಮಾರುಕಟ್ಟೆಗೆ ಭೇಟಿ ನೀಡಿ ವ್ಯಾಪಾರ ಮಾಡುತ್ತಾರೆ. ಆದರೆ ಈಗ ಅವರು ಬರುತ್ತಿಲ್ಲ. ಇಡೀ ಮಾರುಕಟ್ಟೆಯೇ ಮರುಭೂಮಿಯಾಗಿದೆ. ಭಾರತ ಹಾಗೂ ನೇಪಾಳ ಗಡಿ ಭಾಗದಲ್ಲಿ ಹಲವು ಕುಟುಂಬಗಳ ನಡುವೆ ವಿವಾಹ ಸಂಬಂಧಗಳು ನಡೆದಿವೆ. ಆದರೆ ಸದ್ಯದ ಪರಿಸ್ಥಿತಿ ಎರಡೂ ರಾಷ್ಟ್ರಗಳ ಗಡಿ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ' ಎಂದು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ. ಉಮಾಶಂಕರ ವೈಶ್ಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ನೇಪಾಳದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಹೇರಲಾದ ತಾತ್ಕಾಲಿಕ ನಿರ್ಬಂಧವು ಗಡಿ ಪ್ರದೇಶದ ಜನರ ಸಂಪರ್ಕಕ್ಕೆ ಸಮಸ್ಯೆ ಉಂಟು ಮಾಡಿದೆ. ಸದ್ಯ ವಾಟ್ಸ್‌ಆಯಪ್ ಮತ್ತು ಫೇಸ್‌ಬುಕ್ ಮೇಲಿನ ನಿರ್ಬಂಧ ಹಿಂಪಡೆದಿದ್ದರಿಂದ ಸ್ವಲ್ಪ ಮಟ್ಟಿಗೆ ಆತಂಕ ಕಡಿಮೆಯಾಗಿದೆ. ಆದರೆ ಚಿಂತೆ ಕಾಡುತ್ತಲೇ ಇದೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
'ಕಠ್ಮಂಡುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿರುವುದಕ್ಕೆ ಹಲವರು ಸಿಟ್ಟಾಗಿದ್ದಾರೆ. ಶಾಲೆಗಳು ಮುಚ್ಚಿವೆ. ಮಾರುಕಟ್ಟೆ ಚಟುವಟಿಕೆ ಇಲ್ಲದಂತಾಗಿದೆ. ನೇಪಾಳಗಂಜ್‌ನಲ್ಲೂ ಪ್ರತಿಭಟನೆ ತೀವ್ರಗೊಂಡಿದೆ. ಪರಿಸ್ಥಿತಿ ಗಂಭೀರವಾಗಿದೆ. ಭಾರತದ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ' ಎಂದು ನೇಪಾಳಗಂಜ್‌ನ ವರ್ತಕ ವಿಕಾಸ್ ಗುಪ್ತಾ ಹೇಳಿದ್ದಾರೆ.
ಗಡಿಭಾಗದಲ್ಲಿ ಚಟುವಟಿಕೆಯೇ ಸ್ತಬ್ಧವಾಗಿರುವುದರಿಂದ ಪ್ರವಾಸಿಗರನ್ನು ಕರೆದೊಯ್ಯುವ ಏಜೆಂಟರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದೆನ್ನಲಾಗಿದೆ.




