ಲಡಾಖ್: ನೇಪಾಳದಲ್ಲಿ ಜನರೇಷನ್ Gen Z ಪ್ರತಿಭಟನೆ ಚರ್ಚೆಯಲ್ಲಿರುವಾಗಲೇ ಭಾರತದಲ್ಲೂ ಯುವಕರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ನೇಪಾಳದಲ್ಲಿ ಈಚೆಗೆ ಅಲ್ಲಿನ ಸೋಷಿಯಲ್ ಮೀಡಿಯಾ ಬ್ಯಾನ್ ಹಾಗೂ ಭ್ರಷ್ಟಾಚಾರವನ್ನು ವಿರೋಧಿಸಿ ಯುವಕರು ಬೀದಿಗೆ ಇಳಿದಿದ್ದರು. ಇದೀಗ ಲಡಾಕ್ ಪ್ರದೇಶಕ್ಕೆ ರಾಜ್ಯತ್ವ ಅಥವಾ ರಾಜ್ಯದ ಸ್ಥಾನಮಾನ ಕೊಡಬೇಕು ಎಂದು ಆಗ್ರಹಿಸಿ ಅಲ್ಲಿನ ಯುವಕರು ಬೀದಿಗೆ ಇಳಿದಿದ್ದಾರೆ.
ಅಲ್ಲದೇ ಈ ಭಾಗದಲ್ಲಿ ಪ್ರತಿಭಟನೆಯು ಉಗ್ರ ಸ್ವರೂಪ ಪಡೆದುಕೊಂಡಿದೆ. ಲೇಹ್‌ನಲ್ಲಿ ಯುವಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದೆ. ರಾಜ್ಯ ಸ್ಥಾನಮಾನ ಕೇಳಿ ಪ್ರತಿಭಟನೆ ನಡೆಸುತ್ತಿದ್ದ ಯುವಕರು ಹಾಗೂ ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ.
ಇನ್ನು ಲಡಾಕ್‌ನಲ್ಲಿ ಪ್ರತಿಭಟನೆಗಳು ಹಿಂಸಾತ್ಮಕವಾಗಿಸ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಹೇಳಲಾಗಿದೆ. ಬುಧವಾರ ಬೆಳಿಗ್ಗೆ ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಲೇಹ್‌ನಲ್ಲಿರುವ ಬಿಜೆಪಿ ಕಚೇರಿಗೆ ಬೆಂಕಿ ಸಹ ಹಚ್ಚಲಾಗಿದೆ. ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆಯೇ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಅಕ್ಟೋಬರ್ 6 ರಂದು ಲೇಹ್ ಅಪೆಕ್ಸ್ ಬಾಡಿ (LAB) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (KDA) ಸದಸ್ಯರನ್ನು ಒಳಗೊಂಡ ಸರ್ಕಾರ ಮತ್ತು ಲಡಾಖ್ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯುವುದು ನಿಗದಿಯಾಗಿತ್ತು. ಇದಕ್ಕೂ ಮುಂಚೆಯೇ ಭಾರೀ ಪ್ರತಿಭಟನೆ ನಡೆದಿದೆ. ಆರನೇ ಸ್ಕೆಡ್ಯೂಲ್ ವಿಸ್ತರಣೆ ಹಾಗೂ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಸರ್ಕಾರವು ಮಧ್ಯಪ್ರವೇಶ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಎಲ್‌ಎಬಿಯ ಸಂಘಟನೆಯು ಸೆಪ್ಟೆಂಬರ್ 10 ರಿಂದ 35 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿತ್ತು. ಮುಷ್ಕರದ ಸಮಯದಲ್ಲಿ 15 ಜನರಲ್ಲಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು, ಇದರ ಬೆನ್ನಲ್ಲೇ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಅಲ್ಲದೇ ಇದರ ಬೆನ್ನಲ್ಲೇ ಸಂಘಟನೆಯು ಬಂದ್‌ಗೆ ಕರೆ ನೀಡಿತ್ತು. ರಾಜ್ಯ ಸ್ಥಾನಮಾನ ಮತ್ತು ಲಡಾಖ್ ಅನ್ನು ಆರನೇ ಸ್ಕೆಡ್ಯೂಲ್‌ಗೆ ಸೇರಿಸುವ ಬೇಡಿಕೆಗಳನ್ನು ಈಡೇರಿಸುವವರೆಗೆ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಯುವಕರು ಹೇಳಿದ್ದರು.
ಇನ್ನು ನಮ್ಮ ಪ್ರತಿಭಟನೆ ಶಾಂತಿಯುತವಾಗಿದೆ. ಆದರೆ, ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ನಮ್ಮ ಕೈ ತಪ್ಪುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ಮಾತುಕತೆ ವಿಳಂಬವಾಗಿದೆ ಎಂದು ಎಲ್‌ಎಬಿ ಸಹ-ಅಧ್ಯಕ್ಷ ಚೆರಿಂಗ್ ಡೋರ್ಜೆ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ. ಪರಿಸತ ಕಾರ್ಯಕರ್ತರಾದ ಸೋನಮ್ ವಾಂಗ್‌ಚುಕ್ ಅವರು ಸಹ ಈ ಭಾಗದಲ್ಲಿ ನಡೆಯುತ್ತಿರುವ ಆಂದೋಲನದ ಭಾಗವಾಗಿದ್ದಾರೆ.
ಲಡಾಖ್‌ಗೆ ರಾಜ್ಯ ಅಧಿಕಾರ ಯಾಕೆ ಚರ್ಚೆ: ಇನ್ನು 2019 ರಲ್ಲಿ ಲಡಾಖ್‌ಗೆ ಕೇಂದ್ರಾಡಳಿತ ಪ್ರದೇಶ (ಯುಟಿ) ಸ್ಥಾನಮಾನ ಕೊಟ್ಟ ಸಂದರ್ಭದಿಂದಲೂ ಲಡಾಖ್‌ಗೆ ರಾಜ್ಯತ್ವಕ್ಕಾಗಿ ಅಥವಾ ರಾಜ್ಯವನ್ನಾಗಿ ಘೋಷಣೆ ಮಾಡಬೇಕು ಎನ್ನುವ ಬೇಡಿಕೆಗಳು ಮುಂದುವರೆದಿವೆ.




