ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ಶ್ಲಾಘಿಸಿದ್ದು, ಇದರ ಪ್ರಯೋಜನಗಳು ಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
ನಿನ್ನೆ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ 5,100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
"ಜಿಎಸ್ ಟಿ ಕಡಿತ ಮಾಡಿರುವುದರಿಂದ ಅಡುಗೆ ಸಾಮಗ್ರಿಗಳು, ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳು, ಪಾದರಕ್ಷೆಗಳು ಮತ್ತು ಬಟ್ಟೆಗಳಂತಹ ಅಗತ್ಯ ವಸ್ತುಗಳು ಹೆಚ್ಚು ಕೈಗೆಟುಕುವಂತಾಗಿವೆ. ಇದರಿಂದ ಕುಟುಂಬಗಳು ಈಗ ತಮ್ಮ ಮಾಸಿಕ ಬಜೆಟ್‌ನಲ್ಲಿ ಗಣನೀಯ ಉಳಿತಾಯ ಮಾಡಲಿವೆ" ಎಂದು ಹೇಳಿದರು.
ವರ್ಷಗಳಿಂದ ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದರೂ, ತಮ್ಮ ಸರ್ಕಾರ ನಿರಂತರವಾಗಿ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಿದೆ ಎಂದು ಪ್ರಧಾನಿ ಹೇಳಿದರು.
ಜಿಎಸ್‌ಟಿಯನ್ನು ಕೇವಲ ಎರಡು ಸ್ಲ್ಯಾಬ್‌ಗಳಿಗೆ, ಶೇ. 5 ಮತ್ತು ಶೇ. 18ಕ್ಕೆ ಸರಳೀಕರಿಸಲಾಗಿದೆ. ಅಲ್ಲದೆ ಅನೇಕ ವಸ್ತುಗಳು ತೆರಿಗೆ ಮುಕ್ತವಾಗಿವೆ ಮತ್ತು ಇತರ ಸರಕುಗಳ ಮೇಲಿನ ತೆರಿಗೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.




