HEALTH TIPS

ಆನ್‌ಲೈನ್ ನಲ್ಲಿ ಮತದಾರರ ಅಳಿಸುವಿಕೆಗೆ ಆಧಾರ್ OTP ಕಡ್ಡಾಯಗೊಳಿಸಿದ ಚುನಾವಣಾ ಆಯೋಗ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಅಳಂದ ಕ್ಷೇತ್ರದಲ್ಲಿ ಆನ್‌ಲೈನ್ ನಲ್ಲಿ ಮತದಾರರ ಅಳಿಸುವಿಕೆ ನಡೆಸಲಾಗಿದೆ ಎಂದು ಆರೋಪಿಸಿದ ಕೆಲವೇ ದಿನಗಳ ಬಳಿಕ, ಚುನಾವಣಾ ಆಯೋಗವು ಮತದಾರರ ನೋಂದಣಿ, ತಿದ್ದುಪಡಿ ಹಾಗೂ ಅಳಿಸುವಿಕೆ ಅರ್ಜಿಗಳ ಆನ್‌ಲೈನ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಭದ್ರತೆ ಕಾಪಾಡುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ ಎಂದು indianexpress.com ವರದಿ ಮಾಡಿದೆ.

ಇದಕ್ಕಾಗಿ ಮಂಗಳವಾರದಿಂದ ECINet ಪೋರ್ಟಲ್ ಮತ್ತು ಅಪ್ಲಿಕೇಶನ್‌ನಲ್ಲಿ 'ಇ-ಸೈನ್' ವ್ಯವಸ್ಥೆ ಅಳವಡಿಸಲಾಗಿದೆ. ಇದರಡಿ, ಫಾರ್ಮ್ 6 (ಹೊಸ ಮತದಾರರ ನೋಂದಣಿ), ಫಾರ್ಮ್ 7 (ಹೆಸರಿನ ಅಳಿಸುವಿಕೆ/ಆಕ್ಷೇಪಣೆ) ಮತ್ತು ಫಾರ್ಮ್ 8 (ತಿದ್ದುಪಡಿ)ಗಳನ್ನು ಸಲ್ಲಿಸಲು ಬಯಸುವವರು ತಮ್ಮ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಮೂಲಕ OTP ದೃಢೀಕರಣಗೊಳ್ಳಬೇಕಾಗಿದೆ.

ಹಿಂದಿನ ವ್ಯವಸ್ಥೆಯಲ್ಲಿ ಕೇವಲ EPIC ಸಂಖ್ಯೆ ಹಾಗೂ ಮೊಬೈಲ್ ನಂಬರ್ ನೀಡಿದರೆ ಸಾಕಾಗುತ್ತಿತ್ತು. ಆದರೆ ಈಗ ಅರ್ಜಿದಾರರ ಹೆಸರು, ಆಧಾರ್ ಮಾಹಿತಿ ಮತ್ತು ಮೊಬೈಲ್ ಸಂಖ್ಯೆ ಹೊಂದಿಕೆಯಾಗಿರುವುದು ಖಚಿತಪಡಿಸಿದ ಬಳಿಕವೇ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಈ ಪ್ರಕ್ರಿಯೆ CDAC (Centre for Development of Advanced Computing) ನಿರ್ವಹಿಸುವ ಇ-ಸೈನ್ ಪೋರ್ಟಲ್ ಮೂಲಕ ನಡೆಯಲಿದೆ.

ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಈ ಕ್ರಮದಿಂದ ಅಳಂದದಲ್ಲಿ ವರದಿಯಾದಂತಹ ದುರುಪಯೋಗ ಮರುಕಳಿಸುವ ಸಾಧ್ಯತೆ ಕಡಿಮೆಯಾಗಲಿವೆ.

ಸೆಪ್ಟೆಂಬರ್ 18 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, "ಸುಮಾರು 6,000 ಮತದಾರರ ಹೆಸರನ್ನು ಆನ್‌ಲೈನ್ ಮೂಲಕ ಅಳಿಸಲು ಯತ್ನಿಸಲಾಗಿದೆ. ನೈಜ ಮತದಾರರ ವಿವರಗಳನ್ನು ದುರುಪಯೋಗಪಡಿಸಿ OTPಗಳನ್ನು ಬೇರೆ ಸಂಖ್ಯೆಗಳ ಮೂಲಕ ಪಡೆದು ಅರ್ಜಿಗಳನ್ನು ಸಲ್ಲಿಸಲಾಗಿದೆ" ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, "ಯಾರೂ ನೇರವಾಗಿ ಆನ್‌ಲೈನ್‌ನಲ್ಲಿ ಮತ ಅಳಿಸಲು ಸಾಧ್ಯವಿಲ್ಲ. ಸಂಬಂಧಪಟ್ಟ ವ್ಯಕ್ತಿಗೆ ಕೇಳದೇ ಯಾವುದೇ ಅಳಿಸುವಿಕೆ ನಡೆಯುವುದಿಲ್ಲ. ಅಳಂದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗಿದೆ" ಎಂದು ಸ್ಪಷ್ಟನೆ ನೀಡಿತ್ತು.

2023ರ ಫೆಬ್ರವರಿಯಲ್ಲಿ ಪರಿಶೀಲನೆ ನಡೆಸಿದಾಗ ಅಳಂದ ಕ್ಷೇತ್ರಕ್ಕೆ ಸಲ್ಲಿಸಿದ 6,018 ಮತದಾರ ಅಳಿಸುವಿಕೆ ಅರ್ಜಿಗಳ ಪೈಕಿ ಕೇವಲ 24 ಮಾತ್ರ ಮಾನ್ಯವೆಂದು ಪತ್ತೆಯಾಯಿತು. ಉಳಿದ 5,994 ಅರ್ಜಿಗಳು ತಿರಸ್ಕೃತವಾಗಿದ್ದು, ಆ ಮತದಾರರು ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿರುವುದು ದೃಢಪಟ್ಟಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries