HEALTH TIPS

ಥಾಯ್ಲೆಂಡ್‌ | ಮಾಜಿ PM ಥಾಕ್ಸಿನ್ ಜೈಲಲ್ಲೇ ವರ್ಷ ಕಳೆಯಬೇಕೆಂದ ಸುಪ್ರೀಂ ಕೋರ್ಟ್

ಬ್ಯಾಂಕಾಕ್‌: ಅಕ್ರಮ ಸಂಪಾದನೆ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡ ಆರೋಪಕ್ಕೆ ಶಿಕ್ಷೆಗೆ ಗುರಿಯಾಗಿರುವ ಥಾಯ್ಲೆಂಡ್‌ ಮಾಜಿ ಪ್ರಧಾನಿ ಥಾಕ್ಸಿನ್‌ ಶಿನ್ವಾತ್ರಾ ಅವರು ಒಂದು ವರ್ಷ ಸೆರೆವಾಸವನ್ನು ಅನುಭವಿಸಲೇಬೇಕು ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.

ಶಿಕ್ಷೆಯು 2023ರಲ್ಲೇ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳ ತಪ್ಪಿನಿಂದಾಗಿ ಅದು ವಿಳಂಬವಾಗಿದೆ ಎಂಬ ಆರೋಪ ಕುರಿತ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಥಾಕ್ಸಿನ್‌ ಅವರಿಗೆ ವಿಧಿಸಿದ ಶಿಕ್ಷೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಪೊಲೀಸ್ ಆಸ್ಪತ್ರೆಯಲ್ಲಿ ಇದ್ದಮಾತ್ರಕ್ಕೆ ಅದನ್ನು ಶಿಕ್ಷೆ ಎಂದು ಪರಿಗಣಿಸಲಾಗದು. ಅವರು ಶಿಕ್ಷೆಯ ಸಂಪೂರ್ಣ ಅವಧಿಯನ್ನು ಜೈಲಿನಲ್ಲೇ ಕಳೆಯಬೇಕು ಎಂದು ನಿರ್ದೇಶಿಸಿದರು.

ಸ್ವಯಂ ಗಡಿಪಾರಾಗಿದ್ದ ಮಾಜಿ ಪ್ರಧಾನಿ ಆಕ್ಸಿನ್‌ ದಶಕದ ನಂತರ ಸ್ವದೇಶಕ್ಕೆ ಮರಳಿದ್ದರು. ವೈದ್ಯಕೀಯ ಕಾರಣ ನೀಡಿ ಮಧ್ಯರಾತ್ರಿ ಅವರನ್ನು ಬ್ಯಾಂಕಾಕ್‌ನಲ್ಲಿರುವ ಪೊಲೀಸ್ ಜನರಲ್ ಆಸ್ಪತ್ರೆಯ ವಿಶೇಷ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಇವರ ವಿರುದ್ಧದ ಪ್ರಕರಣದಲ್ಲಿ ಒಟ್ಟು ಎಂಟು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆದರೆ ರಾಜ ಮಹಾ ವಜೀರ್‌ಲಾಂಗ್‌ಕಾರ್ನ್ ಅವರು ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿದರು. ಆಸ್ಪತ್ರೆಯ ವಾಸದ ನಂತರ ಪರೋಲ್‌ ಮೇಲೆ ಥಾಕ್ಸಿನ್ ಹೊರಬಂದಿದ್ದರು.

ಥಾಕ್ಸಿನ್‌ಗೆ ಆ ವಿಶೇಷ ಚಿಕಿತ್ಸೆ ದೊರೆಯಿತೇ ಮತ್ತು ಅವರು ನಿಜವಾಗಿಯೂ ಅನಾರೋಗ್ಯಕ್ಕೆ ತುತ್ತಾಗಿದ್ದರೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ಆ ದಿನ ರಾತ್ರಿ ಥಾಕ್ಸಿನ್ ಅವರಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಬಹುದಾಗಿದ್ದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಜೈಲಿನ ವೈದ್ಯರು ಪರೀಕ್ಷಿಸುವ ಮೊದಲೇ ಅವರನ್ನು ನೇರವಾಗಿ ಪೊಲೀಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅದು ನಿಯಮಗಳ ಉಲ್ಲಂಘನೆ' ಎಂದು ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

'ಕುತ್ತಿಗೆ ಭಾಗದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಪೊಲೀಸ್ ಆಸ್ಪತ್ರೆ ಕೋರಿಕೆ ಸಲ್ಲಿಸಿತ್ತು. ಆದರೆ ಅವರ ಬೆರಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬೆರಳಿನ ಸಮಸ್ಯೆ ಗಂಭೀರದ್ದಾಗಿರಲಿಲ್ಲ. ಅದು ಅವರಿಗೆ ಮೊದಲಿನಿಂದಲೇ ಇತ್ತು. ಜೈಲಿಗೆ ಪುನಃ ಕಳುಹಿಸದಂತೆ ಗಂಭೀರ ಸ್ವರೂಪದ ಅನಾರೋಗ್ಯದ ನೆಪವನ್ನು ಥಾಕ್ಸಿನ್ ನೀಡುತ್ತಲೇ ಬಂದಿದ್ದಾರೆ' ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯ ಶಿಕ್ಷೆ ಪೂರ್ಣಗೊಳಿಸಲು ಸೂಚಿಸುತ್ತಿದ್ದಂತೆ ಥಾಕ್ಸಿನ್ ಅವರನ್ನು ಜೈಲಿಗೆ ಕಳುಹಿಸಲಾಯಿತು. ತೀರ್ಪಿನ ದಿನವಾದ ಮಂಗಳವಾರ ಥಾಕ್ಸಿನ್ ಅವರು ತಮ್ಮ ಇಬ್ಬರು ಮಕ್ಕಳ ಸಹಿತ ನ್ಯಾಯಾಲಯಕ್ಕೆ ಬಂದಿದ್ದರು. ಜೈಲಿಗೆ ಹೋಗುವ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವಿಷಯ ಹಂಚಿಕೊಂಡಿರುವ ಅವರು, 'ಭವಿಷ್ಯವನ್ನು ನೋಡಬಯಸುತ್ತೇನೆ. ಎಲ್ಲದಕ್ಕೂ ಕೊನೆ ಹಾಡಬೇಕಿದೆ. ಅದು ಕಾನೂನು ಕ್ರಮವೇ ಆಗಲಿ ಅಥವಾ ಯಾವುದೇ ಸಮಸ್ಯೆ ನನ್ನಿಂದ ಅಥವಾ ನನಗೆ ಸಂಬಂಧಿಸಿದ್ದೇ ಆಗಲಿ. ಇಂದಿನಿಂದ ನಾನು ಸ್ವಾತಂತ್ರ್ಯವಿಲ್ಲದೆ ಬದುಕಬೇಕಾಗಿದೆ. ಆದರೆ ದೇಶ ಮತ್ತದರ ಜನರ ಪರವಾಗಿ ಆಲೋಚಿಸಲು ನಾನು ಸ್ವತಂತ್ರನಾಗಿದ್ದೇನೆ' ಎಂದಿದ್ದಾರೆ.

ಥಾಕ್ಸಿನ್ ಅವರು 2001ರಿಂದ 2006ರವರೆಗೆ ಪ್ರಧಾನಿಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries