ಚಂಡಿಗಢ: ಕೃಷಿ ತ್ಯಾಜ್ಯ ದಹನದ 122 ಹೊಸ ಪ್ರಕರಣಗಳು ಪಂಜಾಬ್ ನಲ್ಲಿ ದಾಖಲಾಗಿವೆ. ಈ ವರ್ಷದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಕರಣ ದಾಖಲಾಗಿರುವುದು ಇದಾಗಿದೆ. ಇದರೊಂದಿಗೆ ಈ ಋತುವಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 743ಕ್ಕೆ ತಲುಪಿದೆ.
2025ರಲ್ಲಿ ಕೃಷಿ ತ್ಯಾಜ್ಯ ದಹನದ ಪ್ರಕರಣಗಳ ಸಂಖ್ಯೆ ಮೂರು ಅಂಕೆಗಳಿಗೆ ತಲುಪಿರುವುದು ರಾಜ್ಯದಲ್ಲಿ ಇದೇ ಮೊದಲು.
ರಾಜ್ಯದಾದ್ಯಂತ ಒಟ್ಟು 31.7 ಲಕ್ಷ ಹೆಕ್ಟೇರ್ ಭತ್ತದ ಬೆಳೆಯಲ್ಲಿ ಇದುವರೆಗೆ ಕಟಾವು ಮಾಡಲಾದ ಪ್ರಮಾಣ ಶೇ. 58. ನವೆಂಬರ್ 2ರ ನಂತರ ಕೊಯ್ಲು ಮಾಡುವ ರೈತರಿಗೆ ಗೋಧಿ ಬಿತ್ತಲು ಸಮಯಾವಕಾಶ ಕಡಿಮೆ ಇರುವುದರಿಂದ ಮುಂಬರುವ ದಿನಗಳಲ್ಲಿ ಕೃಷಿ ತ್ಯಾಜ್ಯ ಹೆಚ್ಚಾಗಬಹುದು.
ಪಂಜಾಬ್ ನ ಮಾಲಿನ್ಯ ನಿಯಂತ್ರಣ ಮಂಡಳಿಯ ದತ್ತಾಂಶದ ಪ್ರಕಾರ, ತರನ್ ತರನ್ ಹಾಗೂ ಅಮೃತಸರ ಜಿಲ್ಲೆಗಳಲ್ಲಿ ಹೆಚ್ಚು ಕೃಷಿ ತ್ಯಾಜ್ಯ ದಹನದ ಪ್ರಕರಣಗಳು ವರದಿಯಾಗಿವೆ. ಯಾಕೆಂದರೆ, ರಾಜ್ಯ ಸರಕಾರದ ಮನವಿ ನಿರ್ಲಕ್ಷಿಸಿ ಇಲ್ಲಿನ ಹಲವು ರೈತರು ಕೃಷಿ ತ್ಯಾಜ್ಯ ದಹನ ಮುಂದುವರಿಸಿದ್ದಾರೆ.
ಒಟ್ಟು 122 ಕೃಷಿ ತ್ಯಾಜ್ಯ ದಹನದ ಘಟನೆಗಳಲ್ಲಿ ದಕ್ಷಿಣ ಮಾಲ್ವಾ ವಲಯದಲ್ಲಿ ಸುಮಾರು 70 ವರದಿಯಾಗಿದೆ. ಅತ್ಯಧಿಕ ಕೃಷಿ ತ್ಯಾಜ್ಯ ದಹನದ ಪ್ರಕರಣಗಳು ತರನ್ ತರನ್‌ನಲ್ಲಿ 224, ಅಮೃತಸರದಲ್ಲಿ 154, ಫಿರೋಝ್‌ಪುರದಲ್ಲಿ 80, ಸಂಗೂರ್‌ನಲ್ಲಿ 47, ಪಾಟಿಯಾಲದಲ್ಲಿ 39, ಗುರುದಾಸ್‌ಪುರದಲ್ಲಿ 38, ಕಪುರ್ತಲಾ 29, ಮಾನ್ಸಾ, ಮೊಗಾ ಹಾಗೂ ಲುಧಿಯಾನದಲ್ಲಿ 8, ಬರ್ನಾಲದಲ್ಲಿ 6, ಮಲೇರ್‌ಕೋಟಲಾದಲ್ಲಿ 4, ಹೋಶಿಯಾರ್‌ಪುರದಲ್ಲಿ 3 ಹಾಗೂ ಎಸ್‌ಬಿಎಸ್ ನಗರದಲ್ಲಿ 2 ವರದಿಯಾಗಿವೆ.
ಈ ನಡುವೆ ಪಠಾಣ್‌ಕೋಟ ಹಾಗೂ ರೂಪನಗರ್ ಜಿಲ್ಲೆಗಳಲ್ಲಿ ಇದುವರೆಗೆ ಕೃಷಿ ತ್ಯಾಜ್ಯ ದಹನದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.




