ಎರಡನೇ ಹಂತದ ವಿಶೇಷ ತೀವ್ರ ಪರಿಷ್ಕರಣೆಯು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ. ಇತ್ತೀಚೆಗೆ, ಮೊದಲನೇ ಹಂತದ ಪರಿಷ್ಕರಣೆಯು ಬಿಹಾರದಲ್ಲಿ ನಡೆದಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಹೇಳಿದರು.
ಎರಡನೇ ಹಂತದ ಪರಿಷ್ಕರಣೆ ನಡೆಯಲಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು: ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳ.
ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ಎರಡು ದಶಕಗಳ ಹಿಂದೆ ಕೊನೆಯ ಬಾರಿ ನಡೆದಿತ್ತು ಎಂದು ಜ್ಞಾನೇಶ್ ಕುಮಾರ್ ಹೇಳಿದರು. 1951 ಮತ್ತು 2004ರ ನಡುವೆ ಒಟ್ಟು 8 ಬಾರಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ನಡೆದಿದೆ ಎಂದರು.
ವಿಶೇಷ ತೀವ್ರ ಪರಿಷ್ಕರಣೆಯ ಮೊದಲ ಹೆಜ್ಜೆಯಾಗಿ, ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರನ್ನು 2002/03/04ರ ಮತದಾರರ ಪಟ್ಟಿಗಳೊಂದಿಗೆ ತಾಳೆ ಮಾಡಲಾಗುವುದು.
►ಎರಡನೇ ಹಂತದ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಯ ಪ್ರಮುಖ ಮಜಲುಗಳು
ಅಕ್ಟೋಬರ್ 28- ನವೆಂಬರ್ 3: ಮುದ್ರಣ/ತರಬೇತಿ
ನವೆಂಬರ್ 4- ಡಿಸೆಂಬರ್ 4: ಮನೆ-ಮನೆ ಗಣತಿ
ಡಿಸೆಂಬರ್ 8: ಕರಡು ಮತದಾರರ ಪಟ್ಟಿಗಳ ಬಿಡುಗಡೆ
ಡಿಸೆಂಬರ್ 9- ಜನವರಿ 8, 2026: ಹೆಸರು ಸೇರ್ಪಡೆಗೆ ಅರ್ಜಿ ಹಾಕುವ ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿ
ಡಿಸೆಂಬರ್ 9- ಜನವರಿ 31: ನೋಟಿಸ್ ಅವಧಿ
ಅಂತಿಮ ಮತದಾರರ ಪಟ್ಟಿ ಪ್ರಕಟನೆ: ಫೆಬ್ರವರಿ 7, 2026
►ಬಿಎಲ್‌ಒಗಳಿಂದ ಮನೆ-ಮನೆ ಭೇಟಿ
ಮನೆ-ಮನೆ ಗಣತಿಗೆ ಮುನ್ನ, ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಗಣತಿ ಅರ್ಜಿಗಳನ್ನು ತುಂಬಿಸುತ್ತಾರೆ. ಅವರು ಪ್ರತಿ ಮತದಾರನಿಗಾಗಿ ಕನಿಷ್ಠ ಮೂರು ಬಾರಿ ಮನೆ-ಮನೆಗೆ ಹೋಗುತ್ತಾರೆ. ತಾತ್ಕಾಲಿಕವಾಗಿ ವಲಸೆ ಹೋದವರು ಅಥವಾ ಕಚೇರಿ ಅವಧಿಯ ವೇಳೆ ಮನೆಯಿಂದ ಹೊರಗಿರುವವರು ಈ ವಿವರಗಳನ್ನು ಸ್ವತಃ ತಾವೇ ಆನ್‌ಲೈನ್ ನಲ್ಲಿ ತುಂಬಿಸಬಹುದಾಗಿದೆ.
''ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರ ಹೊರಬೀಳದಂತೆ ಮತ್ತು ಯಾವುದೇ ಅನರ್ಹ ಮತದಾರ ಪಟ್ಟಿಗೆ ಸೇರ್ಪಡೆಗೊಳ್ಳದಮತೆ ವಿಶೇಷ ತೀವ್ರ ಪರಿಷ್ಕರಣೆಯು ಖಾತರಿಪಡಿಸುತ್ತದೆ'' ಎಂದು ಜ್ಞಾನೇಶ್ ಕುಮಾರ್ ಹೇಳಿದರು.
2003ರ ಮತದಾರರ ಪಟ್ಟಿಯಲ್ಲಿ ಹೆಸರಿರುವವರು- ಅಥವಾ ಅವರ ಹೆತ್ತವರ ಹೆಸರಿದ್ದರೆ- ಅವರು ಹೆಚ್ಚುವರಿ ಪುರಾವೆಗಳನ್ನು ಕೊಡಬೇಕಾಗಿಲ್ಲ. ಗಣತಿ ಫಾರ್ಮ್ ಸಾಕಾಗುತ್ತದೆ.
ಬಿಹಾರ ಎಸ್‌ಐಆರ್ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವಂತೆ, ಆಧಾರ್ ಕಾರ್ಡನ್ನು ಗುರುತಿನ ಪುರಾವೆಯಾಗಿ ಮಾತ್ರ ಸ್ವೀಕರಿಸಲಾಗುತ್ತದೆ ಎಂದು ಜ್ಞಾನೇಶ್ ಕುಮಾರ್ ತಿಳಿಸಿದರು.
►ಸ್ವೀಕರಿಸಲಾಗುವ ಪುರಾವೆಗಳು
► ಕೇಂದ್ರ ಸರಕಾರ/ರಾಜ್ಯ ಸರಕಾರ/ಸರಕಾರಿ ಕ್ಷೇತ್ರದ ಉದ್ದಿಮೆಗಳು ನೀಡುವ ಯಾವುದೇ ಗುರುತು ಪತ್ರ/ಪಿಂಚಣಿ ಪಾವತಿ ಆದೇಶ
►1-7-1987ಕ್ಕೆ ಮುಂಚಿತವಾಗಿ ಸರಕಾರ/ಸ್ಥಳೀಯ ಸಂಸ್ಥೆಗಳು/ಬ್ಯಾಂಕ್‌ಗಳು/ಅಂಚೆ ಕಚೇರಿ/ಎಲ್‌ಐಸಿ/ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ನೀಡಿರುವ ಯಾವುದೇ ಗುರುತು ಪತ್ರ/ಪ್ರಮಾಣಪತ್ರ/ದಾಖಲೆ
► ಸಕ್ಷಮ ಪ್ರಾಧಿಕಾರಗಳು ನೀಡುವ ಜನನ ಪ್ರಮಾಣಪತ್ರಗಳು
► ಪಾಸ್‌ಪೋರ್ಟ್
► ಮಾನ್ಯತೆ ಪಡೆದ ಮಂಡಳಿಗಳು/ವಿಶ್ವವಿದ್ಯಾನಿಲಯಗಳು ನೀಡಿರುವ ಮೆಟ್ರಿಕ್ಯುಲೇಶನ್/ಶೈಕ್ಷಣಿಕ ಪ್ರಮಾಣಪತ್ರ
► ಸಕ್ಷಮ ಸರಕಾರಿ ಪ್ರಾಧಿಕಾರವೊಂದು ನೀಡುವ ಖಾಯಂ ವಾಸ್ತವ್ಯ ಪ್ರಮಾಣಪತ್ರ
► ಅರಣ್ಯ ಹಕ್ಕುಗಳ ಪ್ರಮಾಣಪತ್ರ
► ಸಕ್ಷಮ ಪ್ರಾಧಿಕಾರ ನೀಡುವ ಒಬಿಸಿ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಥವಾ ಯಾವುದೇ ಜಾತಿ ಪ್ರಮಾಣಪತ್ರ
► ನಾಗರಿಕರ ರಾಷ್ಟ್ರೀಯ ನೋಂದಣಿ (ಅದು ಇರುವ ಸ್ಥಳಗಳಲ್ಲಿ)
► ರಾಜ್ಯ/ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸುವ ಕುಟುಂಬ ನೋಂದಣಿ
► ಸರಕಾರ ನೀಡಿರುವ ಯಾವುದೇ ಜಮೀನು/ಮನೆ ಮಂಜೂರಾತಿ ಪತ್ರ
► ಆಧಾರ್ (ಗುರುತಿಗಾಗಿ ಮಾತ್ರ)




