ಬೆಂಗಳೂರು : ಬೇಲೇಕೇರಿ ಬಂದರಿನಲ್ಲಿ ವಶಪಡಿಸಿಕೊಂಡಿದ್ದ ಕಬ್ಬಿಣದ ಅದಿರನ್ನು ಕದ್ದು ರಫ್ತು ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) 12.48 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇದೇ ಮೊದಲ ಬಾರಿಗೆ ಈಡಿ ದೆಹಲಿ ಮತ್ತು ಹರ್ಯಾಣದ ಗುರುಗ್ರಾಮದ ಹಲವು ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದೆ.
ಗಣಿಗಾರರು, ಅದಿರು ಸಾಗಾಣಿಕೆದಾರರು, ಬಂದರು ಮತ್ತು ಹಡಗು ಕಂಪನಿಗಳು, ರಫ್ತುದಾರರು ಸೇರಿ ದೊಡ್ಡ ಜಾಲವೊಂದನ್ನು ರಚಿಸಿ ಅದಿರು ಕಳ್ಳಸಾಗಣೆ ನಡೆಸಿದ್ದಾರೆ. ಇದರಿಂದ ರಾಜ್ಯದ ಖಜಾನೆಗೆ ಭಾರೀ ನಷ್ಟವಾಗಿದೆ ಎಂದು ಈಡಿ ತನಿಖೆಯಲ್ಲಿ ಬಹಿರಂಗವಾಗಿದೆ.
ದೆಹಲಿ ಮತ್ತು ಗುರುಗ್ರಾಮದಲ್ಲಿ ನೆಲೆಗೊಂಡಿದ್ದ ಹಲವಾರು ಕಂಪನಿಗಳ ಮೂಲಕ ಹಣಕಾಸು ವ್ಯವಹಾರ ನಡೆಸಲಾಗುತ್ತಿತ್ತು. ಕಳ್ಳಸಾಗಣೆ ಮೂಲಕ ಬಂದ ಹಣವನ್ನು ವಿವಿಧ ಕಂಪನಿಗಳಿಗೆ ವರ್ಗಾಯಿಸಿರುವುದು ಪತ್ತೆಯಾಗಿದೆ.
ಎಂಎಸ್‌ಪಿಎಲ್ ಲಿಮಿಟೆಡ್, ಗ್ರೀನ್‌ಟೆಕ್ಸ್‌ಟ್ ಮೈನಿಂಗ್ ಇಂಡಸ್ಟ್ರೀಸ್, ಶ್ರೀನಿವಾಸ ಮಿನರಲ್ಸ್ ಟ್ರೇಡಿಂಗ್ ಕಂಪನಿ, ಅರ್ಶದ್ ಎಕ್ಸ್‌ಪೋರ್ಟ್ಸ್, ಎಸ್‌ವಿಎಂ ನೆಟ್ ಪ್ರಾಜೆಕ್ಟ್ ಸಲ್ಯೂಷನ್ಸ್ ಲಿಮಿಟೆಡ್ ಹಾಗೂ ಆಲ್ಫೈನ್ ಮಿನ-ಮೆಟಲ್ಸ್ ಇಂಡಿಯಾ ಲಿಮಿಟೆಡ್‌ಗಳಿಗೆ ಈ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಹಣದಿಂದ ಖರೀದಿಸಿದ 12.48 ಕೋಟಿಯಷ್ಟು ಸ್ಥಿರಾಸ್ತಿಗಳನ್ನು ಈಡಿ ಈಗ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.
ತನಿಖೆಯ ಭಾಗವಾಗಿ ಈಡಿ ಅಕ್ಟೋಬರ್ 15 ರಂದು ಬೆಂಗಳೂರು, ಹೊಸಪೇಟೆ, ದೆಹಲಿ ಮತ್ತು ಗುರುಗ್ರಾಮದಲ್ಲಿನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿ ಪ್ರಮುಖ ದಾಖಲೆಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳು ಹಾಗೂ 42 ಲಕ್ಷ ರೂ. ನಗದನ್ನು ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.




