HEALTH TIPS

ಎಐ ರಚಿತ ಚಿತ್ರಗಳು ಭಾರತದಲ್ಲಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಹೆಚ್ಚಿಸುತ್ತಿವೆ : ಅಮೆರಿಕದ ಚಿಂತನ ಚಾವಡಿ ವರದಿ

ನವದೆಹಲಿ: ಕೃತಕ ಬುದ್ಧಿಮತ್ತೆ(ಎಐ) ಸಾಧನಗಳಿಂದ ರಚಿಸಲಾಗುತ್ತಿರುವ ಉತ್ಪ್ರೇಕ್ಷಿತ ದುಷ್ಟ ಲಕ್ಷಣಗಳನ್ನು ಹೊಂದಿರುವ ಸ್ಟೀರಿಯೊಟಿಪಿಕಲ್ ಮುಸ್ಲಿಮ್ ಪುರುಷರು ಮತ್ತು ಮಹಿಳೆಯರನ್ನು ಲೈಂಗಿಕವಾಗಿ ಬಿಂಬಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಹಿಂದುತ್ವ ಪಿತೂರಿ ಸಿದ್ಧಾಂತಗಳನ್ನು ಪ್ರಚಾರಿಸಲು ಅಥವಾ ದೇಶದ ಮುಸ್ಲಿಮರ ವಿರುದ್ಧ ದ್ವೇಷವನ್ನು ಹೆಚ್ಚಿಸಲು ಅವು ಬಳಕೆಯಾಗುತ್ತಿವೆ.

ಇಂತಹ ಚಿತ್ರಗಳ ರಚನೆಯನ್ನು ಹೆಚ್ಚು ಸುಲಭಗೊಳಿಸಿರುವ ಎಐ ಸಾಧನಗಳ ಪ್ರಸರಣವು ಇಸ್ಲಾಮೋಫೋಬಿಕ್ ಸಂದೇಶಗಳು ಮತ್ತು ತಪ್ಪು ಮಾಹಿತಿಗಳ ಹರಡುವಿಕೆಯನ್ನು ಹೆಚ್ಚಿಸಬಹುದು ಎಂದು ಅಮೆರಿಕದ ಚಿಂತನ ಚಾವಡಿ 'ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್' ಇತ್ತೀಚಿಗೆ ಬಿಡುಗಡೆಗೊಳಿಸಿರುವ ವರದಿಯು ಎಚ್ಚರಿಕೆ ನೀಡಿದೆ.

ಮೇ 2023 ಮತ್ತು ಮೇ 2025ರ ನಡುವೆ ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಾದ್ಯಂತ ಹಿಂದಿ ಮತ್ತು ಇಂಗ್ಲಿಷ್‌ಗಳಲ್ಲಿ 292 ಸಾರ್ವಜನಿಕ ಖಾತೆಗಳಿಂದ ಪೋಸ್ಟ್ ಮಾಡಲಾದ 1326 ಎಐ ರಚಿತ ಚಿತ್ರಗಳು ಮತ್ತು ವೀಡಿಯೊಗಳನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ.

ChatGPTತಿಂಗಳಿಗೆ ಐದು ಡಾಲರ್‌ಗೂ ಕಡಿಮೆ ಅಗ್ಗದ ಚಂದಾದಾರಿಕೆಯ ಮೂಲಕ ಭಾರತದ ವಿಶಾಲ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಇಂತಹ ವಿಶ್ಲೇಷಣೆಯು ವಿಶೇಷ ಮಹತ್ವವನ್ನು ಪಡೆದುಕೊಳ್ಳುತ್ತದೆ ಎಂದು ವರದಿಯು ಹೇಳಿದೆ.

ಭಾರತದ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ತಪ್ಪು ಮಾಹಿತಿಗಳನ್ನು ಉತ್ತೇಜಿಸುವ ಚಿತ್ರಗಳನ್ನು ರಚಿಸಲು Midjourney, Stable Diffusion ಮತ್ತು DALL.E ನಂತಹ ಎಐ ಸಾಧನಗಳನ್ನು ಬಳಸಲಾಗುತ್ತಿರುವ ವಿಧಾನಗಳಲ್ಲಿ ತ್ವರಿತ ಮತ್ತು ತುರ್ತು ಹಸ್ತಕ್ಷೇಪದ ಅಗತ್ಯವನ್ನು ವರದಿಯು ಒತ್ತಿ ಹೇಳಿದೆ.

ಎದ್ದು ಕಾಣುವ, ವಾಸ್ತವಿಕ ಮತ್ತು ಕೆಲವೊಮ್ಮೆ ಎನಿಮೇಟೆಡ್ ಆಗಿರುವ ಈ ಚಿತ್ರಗಳಲ್ಲಿ ಕೆಲವನ್ನು ಹಿಂದುತ್ವ ಪರ ಮಾಧ್ಯಮ ಸಂಸ್ಥೆಗಳು ಯೂಟ್ಯೂಬ್ ಥಂಬ್‌ನೇಲ್(ಅಡಕ ಚಿತ್ರ)ಗಳಾಗಿ ಅಥವಾ ಲೇಖನಗಳೊಂದಿಗೆ ಬಳಸಿಕೊಂಡಿವೆ ಎಂದು ವರದಿಯು ಹೇಳಿದೆ.

ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಇಂತಹ ವಿಷಯವು ಕಮೆಂಟ್‌ಗಳು, ಲೈಕ್‌ಗಳು ಮತ್ತು ಶೇರ್‌ಗಳ ರೂಪದಲ್ಲಿ 2.73 ಕೋಟಿಗೂ ಅಧಿಕ ಬಳಕೆದಾರರನ್ನು ಆಕರ್ಷಿಸಿದೆ. ಈ ಪೈಕಿ ಶೇ.91ರಷ್ಟಕ್ಕೆ ಎಕ್ಸ್ ಒಂದೇ ಸಾಕ್ಷಿಯಾಗಿತ್ತು. ಮುಸ್ಲಿಮರನ್ನು ರಾಕ್ಷಸರಂತೆ ಬಿಂಬಿಸಲು, ಲೈಂಗಿಕ ದೃಷ್ಟಿಕೋನದಿಂದ ನಿರೂಪಿಸಲು, ಅಪರಾಧೀಕರಿಸಲು ಅಥವಾ ಅವರ ವಿರುದ್ಧ ಹಿಂಸೆಯನ್ನು ಪ್ರಚೋದಿಸಲು ಸೃಜನಾತ್ಮಕ ಎಐನಂತಹ ಉದಯೋನ್ಮುಖ ತಂತ್ರಜ್ಞಾನಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವುದನ್ನು ಇದು ಸೂಚಿಸುತ್ತಿದೆ ಎಂದು ವರದಿಯು ಹೇಳಿದೆ.

ಲಿಂಗ ಆಧಾರಿತ ಇಸ್ಲಾಮೋಫೋಬಿಯಾದ ಎಐ ಚಿತ್ರಗಳು ಹೆಚ್ಚಿನ ಜನರನ್ನು ಆಕರ್ಷಿಸಿದ್ದವು ಎಂದು ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ರಾಕಿಬ್ ಹಮೀದ್ ನಾಯ್ಕ್ ವರದಿಯಲ್ಲಿ ಹೇಳಿದ್ದಾರೆ.

ಮುಸ್ಲಿಮ್ ಮಹಿಳೆಯರು ವಿಶಿಷ್ಟ ಮತ್ತು ಲಿಂಗ ಆಧಾರಿತ ಬೆದರಿಕೆಯನ್ನು ಎದುರಿಸುತ್ತಾರೆ. ಅನೇಕ ಚಿತ್ರಗಳಲ್ಲಿ ಹೆಚ್ಚಾಗಿ ತಲೆಗೆ ಸ್ಕಾರ್ಫ್ ಧರಿಸಿರುವ ಮತ್ತು ಮೈ ತೋರುವ ಬಟ್ಟೆಗಳನ್ನು ಧರಿಸಿರುವ ಮುಸ್ಲಿಮ್ ಮಹಿಳೆಯರನ್ನು ಗುಲಾಮರಂತೆ ಅಥವಾ ಬಲಿಷ್ಠ ಹಿಂದು ಪುರುಷರ ಪ್ರಾಬಲ್ಯಕ್ಕೊಳಪಟ್ಟಿರುವಂತೆ ಬಿಂಬಿಸಲಾಗಿದೆ ಎಂದು ವರದಿಯಲ್ಲಿ ಹೇಳಿರುವ ಸಂಶೋಧಕರು, ಈ ಚಿತ್ರಗಳನ್ನು ಮುಸ್ಲಿಮ್ ಮಹಿಳೆಯರ ವಿರುದ್ಧ ಹಿಂಸಾಚಾರದ ಸಾಂಕೇತಿಕ ಕೃತ್ಯಗಳು ಎಂದು ಬಣ್ಣಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries